ಅಥಣಿ: ಇಂದಿನಿಂದ ಶಾಲಾ-ಕಾಲೇಜುಗಳು ಪುನಾರಂಭಗೊಂಡಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿ ಎಮ್.ಬಿ ಮೊರಟಗಿ ಅವರು ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಂತರ ಈಟಿವಿ ಭಾರತದೊಂದಿಗೆ ಮಾತನಾಡಿ, ರಾಜ್ಯಾದ್ಯಂತ ಇಂದು ಶಾಲಾ - ಕಾಲೇಜುಗಳು ಪ್ರಾರಂಭವಾಗಿದೆ. ತಾಲೂಕಿನಲ್ಲಿ 86 ಪ್ರೌಢಶಾಲೆಗಳಿದ್ದು, ಹತ್ತನೇ ತರಗತಿಯಲ್ಲೇ 6,495 ಮಕ್ಕಳು ಹಾಗೂ 2,000 ಸಾವಿರ ಶಿಕ್ಷಕರಿದ್ದಾರೆ. ಕೊವಿಡ್-19 ಹಿನ್ನೆಲೆ ಸರ್ಕಾರದ ನೀತಿ ನಿಯಮಗಳ ಪ್ರಕಾರ ಶಾಲೆಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಶಾಲೆ ಪ್ರಾರಂಭವಾಗಿದೆ. ಇನ್ನೂ ಪ್ರತಿನಿತ್ಯ ಶಾಲೆ ಕೊಠಡಿ ಸ್ವಚ್ಛಗೊಳಿಸುವ ಕಾರ್ಯ ಮುಂದುವರೆಯಲಿದೆ. ಇನ್ನೂ ಯಾವುದೇ ಮಕ್ಕಳ ಪಾಲಕರು ಹೆದರುವ ಅಗತ್ಯವಿಲ್ಲ, ಭಯ ಮುಕ್ತವಾಗಿ ಮಕ್ಕಳು ಶಾಲೆಗೆ ಬನ್ನಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಮಕ್ಕಳ ಶಿಕ್ಷಣದ ಹಿತದೃಷ್ಟಿಯಿಂದ ಶಾಲೆಗಳನ್ನು ಪ್ರಾರಂಭಿಸಲಾಗಿದೆ. ಮಕ್ಕಳು ಶಾಲೆಗೆ ಬರುವಾಗ ಪಾಲಕರ ಒಪ್ಪಿಗೆ ಪ್ರಮಾಣ ಪತ್ರ ತರಬೇಕು. ತರಗತಿಗೆ ಬರಬೇಕೆಂದು ಒತ್ತಾಯ ಇಲ್ಲದೇ ಇರುವುದರಿಂದ ನೀವು ಮನೆಯಲ್ಲಿಯೂ ವ್ಯಾಸಂಗ ಮಾಡಬಹುದು ಮತ್ತು ಹಳೆಯ ಬಸ್ ಪಾಸ್ ಉಪಯೋಗಿಸಿಕೊಂಡು ಶಾಲೆಗೆ ಬರಬಹುದು ಎಂದು ಸರ್ಕಾರ ತಿಳಿಸಿದೆ. ನಿತ್ಯ ನಾವು ಅಥಣಿ ತಾಲೂಕಿನ ಪ್ರೌಢ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ ಎಂದು ಹೇಳಿದರು.
ಈ ಸುದ್ದಿಯನ್ನೂ ಓದಿ:ಕೋಲಾರದಲ್ಲಿ ಶಾಲೆ ಆರಂಭಕ್ಕೆ ತೊಡಕಾದ ಚುನಾವಣೆ ಮತ ಎಣಿಕಾ ಸಾಮಗ್ರಿಗಳು
ಜಾಧವಜಿ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ನಿರ್ದೇಶಕ ಡಾ. ಸುಹಾಸ ಕುಲಕರ್ಣಿ ಅವರು ಮಾತನಾಡಿ, ಸರ್ಕಾರ ನಿರ್ಧರಿಸಿದಂತೆ ನಾವು ಶಾಲಾ ಕಾಲೇಜುಗಳನ್ನು ಆರಂಭಿಸಿದ್ದೇವೆ. ಕೋವಿಡ್19 ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿಕೊಂಡು ಮಕ್ಕಳ ಹಾಗೂ ಶಿಕ್ಷಕರ ಆರೋಗ್ಯ ಕಾಳಜಿ ಹಿತದೃಷ್ಟಿಯಿಂದ ಕಟ್ಟು ನಿಟ್ಟಿನ ಮುಂಜಾಗ್ರತಾ ಕ್ರಮಗಳನ್ನು ಜಾರಿ ಮಾಡಲಾಗಿದೆ. ಮಕ್ಕಳು ತುಂಬಾ ಸಂತೋಷದಿಂದ ಮರಳಿ ಶಾಲೆಗೆ ಬರುತ್ತಿದ್ದಾರೆ ಎಂದು ಪ್ರತಿಕ್ರಿಯಿಸಿದರು.