ಬೆಳಗಾವಿ: ‘ಶಿಕ್ಷಣ, ಅವಕಾಶ ಹಾಗೂ ಯಶಸ್ಸಿನಿಂದ ಬಹು ದೂರ ಉಳಿದಿದ್ದ ಸಮುದಾಯಕ್ಕೂ ಅವಕಾಶ ಸಿಗುವಂತೆ ಮಾಡಿದ್ದು ಸಂವಿಧಾನ. ಇಂಥ ಶ್ರೇಷ್ಠ ಸಂವಿಧಾನ ರಚನೆ ಮಾಡಿರುವ ಡಾ. ಬಿ ಆರ್ ಅಂಬೇಡ್ಕರ್ ಅವರು ವಂಚಿತರ ಪಾಲಿನ ಪ್ರಜ್ಞಾಸೂರ್ಯ ಎಂದು ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಶ್ಲಾಘಿಸಿದರು.
ನಗರದ ಕರ್ನಾಟಕ ಕಾನೂನು ಸಂಸ್ಥೆಯ ರಾಜಾ ಲಖಮಗೌಡ ಕಾನೂನು ಕಾಲೇಜಿನಲ್ಲಿ ಶನಿವಾರ ಸಂಜೆ ಹಿರಿಯ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮ ಆಯೋಜಿಸಿದ್ದರು. ಈ ಸಂದರ್ಭದಲ್ಲಿ ಕಾಲೇಜಿನ ಹಳೆಯ ವಿದ್ಯಾರ್ಥಿಗಳಾದ ಕರ್ನಾಟಕ ಹೈಕೋರ್ಟ್‌ನ ಐವರು ನ್ಯಾಯಮೂರ್ತಿಗಳನ್ನು ಸತ್ಕರಿಸಿ ಮಾತನಾಡಿದ ವರಾಳೆ, ಈ ದೇಶದಲ್ಲಿ ಶೋಷಿತ, ಶಿಕ್ಷಣ ವಂಚಿತ, ತುಳಿತಕ್ಕೊಳಗಾದವರ ಸಂಖ್ಯೆ ಬಹಳಷ್ಟಿತ್ತು. ಶಿಕ್ಷಣ ವಂಚಿತರಾದ ಅವರೆಲ್ಲ ಅವಕಾಶಗಳಿಂದಲೂ ವಂಚಿತರಾಗಿ, ಇತರರಿಗಿಂತ ಸಾವಿರಾರು ಕಿಲೋಮೀಟರ್ ಹಿಂದೆ ನಿಲ್ಲುವ ಸ್ಥಿತಿಯಿತ್ತು. ಆದರೆ ಸಂವಿಧಾನ ಜಾರಿ ಬಂದ ಮೇಲೆ ನಾನೂ ಸೇರಿದಂತೆ, ನನ್ನಂತ ಎಷ್ಟೋ ಮಂದಿಗೆ ಸಾಕಷ್ಟು ಅವಕಾಶಗಳು ಲಭಿಸಿದವು ಎಂದರು.
ನೀವು ಯಶಸ್ಸಿನ ಬೆನ್ನು ಹತ್ತಬೇಡಿ. ಕಾರ್ಯಕ್ಷಮತೆ ಹೆಚ್ಚಿಸಿಕೊಳ್ಳಿ, ಆಗ ಯಶಸ್ಸು ತನ್ನಿಂದ ತಾನೇ ನಿಮ್ಮ ಬೆನ್ನು ಹತ್ತಿ ಬರುತ್ತದೆ. ಯಶಸ್ಸಿಗೆ ಕಠಿಣ ಪರಿಶ್ರಮವೊಂದೇ ದಾರಿ. ಬೇರೆ ಅನ್ಯಮಾರ್ಗಗಳು ಇಲ್ಲ. ವಕೀಲಿ ವೃತ್ತಿ ಕೂಡ ಒಂದ ಕಾಯಕ. ವ್ಯವಹಾರ ಅಲ್ಲ ಎನ್ನುವುದನ್ನು ಯುವ ವಕೀಲರು ಅರ್ಥ ಮಾಡಿಕೊಳ್ಳಬೇಕು. ಕೇವಲ ಹಣ ಗಳಿಕೆ ಹಿಂದೆ ಹೋದರೆ ಯಶಸ್ಸು ಸಿಗುವುದಿಲ್ಲ. ನಾವು ಹುಟ್ಟಿ, ಬೆಳೆಯಲು ಕಾರಣವಾಗಿದ್ದು ಈ ಸಮಾಜ. ಸಮಾಜದ ಋಣ ತೀರಿಸಲು ನ್ಯಾಯ ಮಾರ್ಗವನ್ನೇ ಆಯ್ಕೆ ಮಾಡಬೇಕು ಎಂದು ಕಿವಿಮಾತು ಹೇಳಿದರು.