ಬೆಳಗಾವಿ :ಕೆಎಎಸ್ ಅಧಿಕಾರಿಯೊಬ್ಬರ ಪತಿಯ ಮೃತದೇಹವು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇಲ್ಲಿನ ಆಜಮ್ ನಗರದಲ್ಲಿ ಸೋಮವಾರ ಘಟನೆ ನಡೆದಿದೆ. ಎಫ್‌ಡಿಎ ಅಧಿಕಾರಿ ಜಾಫರ್ ಫೀರ್ಜಾದೆ (39) ಎಂಬುವರು ಮೃತ ವ್ಯಕ್ತಿ. ಇಂದು ಮಧ್ಯಾಹ್ನ ಮನೆಯ ಕೋಣೆಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ, ಬಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ಜಾಫರ್ ಫೀರ್ಜಾದೆ ಮೃತದೇಹವನ್ನು ಸ್ಥಳಾಂತರ ಮಾಡಲಾಗಿದೆ. ಡಿಟಿಐನಲ್ಲಿ ಎಫ್‌ಡಿಎ ತರಬೇತಿಯಲ್ಲಿದ್ದ ಜಾಫರ್ ಫಿರ್ಜಾದೆ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಜಾಫರ್ ಫೀರ್ಜಾದೆ ಪತ್ನಿಯು ಕೆಎಎಸ್ ಅಧಿಕಾರಿ ಆಗಿದ್ದು, ಕಾರ್ಯ ನಿಮಿತ್ತ ಬೆಂಗಳೂರಿಗೆ ತೆರಳಿದ್ದರು. ಅವರು ಹಿಡಕಲ್ ಡ್ಯಾಂ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಹಿಳಾ ಅಧಿಕಾರಿಯು ಬೆಂಗಳೂರಿನಿಂದ ಮರಳುತ್ತಿದ್ದು, ಅವರ ಆಗಮನಕ್ಕಾಗಿ ಕುಟುಂಬಸ್ಥರು ಕಾಯುತ್ತಿದ್ದಾರೆ. ಬೆಳಗಾವಿಯ ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕುಡಿದ ಮತ್ತಿನಲ್ಲಿ ಯುವಕ ಸಾವು:ಇದು ಅಧಿಕಾರಿಯೊಬ್ಬರ ಪತಿ ಸಾವಿನ ಸುದ್ದಿಯಾದರೆ, ಮತ್ತೊಂದು ಕಡೆ ಕುಡಿದ ಮತ್ತಿನಲ್ಲಿ ಕಟ್ಟಡದ 3ನೇ ಮಹಡಿಯಲ್ಲಿದ್ದ ಪಬ್‌ನಿಂದ ಜಿಗಿದು ಯುವಕ ಸಾವನ್ನಪ್ಪಿದ ಘಟನೆ ಬೆಳಗಾವಿಯ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯ ತಮ್ಮಣ್ಣ ಆರ್ಕೇಡ್‌ನಲ್ಲಿ ಸೋಮವಾರ ನಡೆದಿದೆ. ತಮ್ಮಣ್ಣ ಆರ್ಕೇಡ್‌ನ 3ನೇ ಮಹಡಿಯಲ್ಲಿ ಇರುವ ಬ್ರೂ 59 ಪಬ್‌ನಿಂದ ಯುವಕ ಜಿಗಿದಿದ್ದಾನೆ ಎಂದು ತಿಳಿದುಬಂದಿದೆ.
ಪಬ್‌ನ ಕಿಟಕಿಯಿಂದ ಕೆಳಗೆ ಜಿಗಿದಿದ್ದ ಯೋಗೇಶ್ ಶಾನಬಾಗ್ (28) ಸಾವನ್ನಪ್ಪಿದ್ದಾನೆ. ಮೃತ ಯುವಕ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಮೂಲದವನಾಗಿದ್ದಾನೆ. ಯೋಗೇಶ್ ಸಂಜೆ 6 ಗಂಟೆ ವೇಳೆಗೆ ಸ್ನೇಹಿತರ ಜೊತೆ ಪಬ್‌ಗೆ ಬಂದಿದ್ದ, ಈ ವೇಳೆ ಕಿಟಕಿ ಬಳಿ ಬಂದು ಏಕಾಏಕಿ ಕೆಳಗೆ ಜಿಗಿದಿದ್ದಾನೆ. ಬಳಿಕ ಗಂಭೀರ ಗಾಯಗೊಂಡಿದ್ದರಿಂದ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಿಸದೆ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಘಟನೆಯೂ ಸಹ ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇದನ್ನೂ ಓದಿ:ತವರಿಗೆ ಹೋಗುತ್ತೇನೆ ಎಂದ ಪತ್ನಿ ಕೊಂದ ಪತಿ: ನಂತರ ಆತ್ಮಹತ್ಯೆಗೆ ಶರಣು