ಚಿಕ್ಕೋಡಿ:ವೃತ್ತಿಯಲ್ಲಿ ಪೊಲೀಸ್ ಕಾನ್ಸ್ಟೇಬಲ್ ಆಗಿರುವ ವ್ಯಕ್ತಿಯೊಬ್ಬ ತನ್ನ 4 ತಿಂಗಳ ಮಗುವನ್ನು ಡಾಂಬರು ರಸ್ತೆಗೆಸೆದು ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಬೆಳಗಾವಿ ಜಿಲ್ಲೆಯ ಮುಡಲಗಿ ತಾಲೂಕಿನ ದುರದುಂಡಿ ಗ್ರಾಮದಲ್ಲಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪೊಲೀಸ್ ಕಾನ್ಸ್ಟೆಬಲ್ ಬಸಪ್ಪ ಬಳುಣಕಿ ತನ್ನ ಮಗುವನ್ನೇ ಕೊಂದ ಆರೋಪಿ. ಈತ ಡಾಂಬರು ರಸ್ತೆಗೆಸೆದು ಕೊಲೆ ಮಾಡಿರುವ ಆರೋಪ ಎದುರಿಸುತ್ತಿದ್ದಾರೆ. ಈ ಕುರಿತು ಕುಡಚಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ವಿವರ: ಆರೋಪಿಯು ಬೆಳಗಾವಿ ಏರ್‌ಪೋರ್ಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಮೂಲತಃ ಗೋಕಾಕ್ ತಾಲೂಕಿನ ದುರದುಂಡಿ ನಿವಾಸಿ. ವಾರದ ಹಿಂದಷ್ಟೇ ಆತನ ಹೆಂಡತಿ ರಾಯಭಾಗ ತಾಲೂಕಿನ ಚಿಂಚಲಿ ಗ್ರಾಮದ ತಮ್ಮ ತವರು ಮನೆಗೆ ಬಂದಿದ್ದರು. ಸೆ. 18ರಂದು ಹೆಂಡತಿಯನ್ನು ಕರೆದುಕೊಂಡು ಹೋಗಲು ಬಸಪ್ಪ ಚಿಂಚಲಿ ಗ್ರಾಮಕ್ಕೆ ಆಗಮಿಸಿದ್ದರು. ಗಣೇಶ ಹಬ್ಬ ಮುಗಿಯಲಿ ನಂತರ ನಾವೇ ಕಳುಹಿಸುತ್ತೇವೆ ಎಂದು ಆಕೆಯ ಮನೆಯವರು ಬಸಪ್ಪನಿಗೆ ಹೇಳಿದ್ದರು.
ಆದರೆ ಹಠ ಬಿಡದೆ ಮಗುವನ್ನಾದರೂ ಕಳುಹಿಸಿ ಎಂದು ಬಸಪ್ಪ ಪಟ್ಟು ಹಿಡಿದಿದ್ದನು. ಆದರೆ ಕತ್ತಲಾಗಿರುವುದರಿಂದ ನೀವು ದ್ವಿಚಕ್ರ ವಾಹನದಲ್ಲಿ ಬಂದಿದ್ದೀರಿ, ಈಗ ಬೇಡ ಮುಂಜಾನೆ ನಾನೇ ಕರೆದುಕೊಂಡು ಬರುತ್ತೇನೆ ಎಂದು ಹೆಂಡತಿ ಹೇಳುತ್ತಿದ್ದಂತೆ, ಪತ್ನಿ ಮೇಲೆ ಕೋಪಗೊಂಡ ಬಸಪ್ಪ, ಮಗುವನ್ನು ಸಿಟ್ಟಿನಿಂದ ಡಾಂಬರು ರಸ್ತೆಗೆ ಎಸೆದಿದ್ದನು. ಎಸೆತದ ಹೊಡೆತಕ್ಕೆ ಮಗುವಿಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲಿ ಮೃತಪಟ್ಟಿರುವುದಾಗಿ ದೂರಿನಲ್ಲಿ ದಾಖಲಾಗಿದೆ. ಆರೋಪಿಯ ಅತ್ತೆ ಮಾವ ಕುಡಚಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.