ಚಿಕ್ಕೋಡಿ : ಬೆಂಗಳೂರಿನಲ್ಲಿ ಪಾದಚಾರಿ ಮಾರ್ಗದಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ವೈರ್ ತುಳಿದ ತಾಯಿ ಹಾಗೂ ಮಗು ಸಾವನ್ನಪ್ಪಿದ್ದ ಘಟನೆ ಮಾಸುವ ಮುನ್ನವೇ ಅಥಣಿಯಲ್ಲಿ ತಂದೆ ಮತ್ತು ಮಗನಿಗೆ ವಿದ್ಯುತ್ ತಗುಲಿ, ಸ್ಥಳದಲ್ಲಿಯೇ ಇಬ್ಬರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಭಾನುವಾರ ಸಂಜೆ ಸಂಭವಿಸಿದೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಚಿಕ್ಕಟ್ಟಿ ಗ್ರಾಮದ ಮಲ್ಲಿಕಾರ್ಜುನ ಸದಾಶಿವ ಪೂಜಾರಿ (32) ಹಾಗೂ ಪ್ರೀತಮ್ ಮಲ್ಲಿಕಾರ್ಜುನ ಪೂಜಾರಿ (7) ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟಿರುವ ಅಪ್ಪ-ಮಗ.
ಇಂದು ಮಧ್ಯಾಹ್ನ ಮಲ್ಲಿಕಾರ್ಜುನ ತೋಟದಲ್ಲಿ ಬೋರ್ವೆಲ್ ಮೋಟಾರ್ ಪ್ರಾರಂಭಿಸಿ ಬೇರೆ ಕಡೆ ನೀರು ತಿರುವಲು (ವಾಲ್ ಟರ್ನ್) ಮುಂದಾಗಿದ್ದಾರೆ. ಆದರೆ ಬೋರ್ವೆಲ್ ಹತ್ತಿರ ವೈರ್ ತುಂಡಾಗಿರುವುದನ್ನ ಗಮನಿಸದೇ ವಿದ್ಯುತ್ ಕೈಗೆ ಸ್ಪರ್ಶಿಸಿ ಸಾವು ಸಂಭವಿಸಿದೆ. ಅಪ್ಪನನ್ನು ಉಳಿಸಲು ಹೋಗಿ ಮಗ ಪ್ರೀತಮ್ ಕೂಡ ಸ್ಥಳದಲ್ಲಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಸಂಭವಿಸಿದೆ. ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯುತ್ ತಂತಿ ತಗುಲಿ ಬಾಲಕ ಸಾವು (ಪ್ರತ್ಯೇಕ ಘಟನೆ):ವಿದ್ಯುತ್ ತಂತಿ ತಗುಲಿ ಬಾಲಕನೋರ್ವ ಮೃತಪಟ್ಟ ಘಟನೆ ಧಾರವಾಡದ ಮದಿಹಾಳ ಬಡಾವಣೆಯಲ್ಲಿ ಶುಕ್ರವಾರ (ನವೆಂಬರ್ 24-2023) ನಡೆದಿತ್ತು. ಶ್ರೇಯಸ್ ಸಿನ್ನೂರು (16) ಮೃತ ಬಾಲಕ. ವಿದ್ಯುತ್ ತಂತಿ ತಗುಲಿದ ತಕ್ಷಣ ಬಿಡಿಸಲು ಹೋಗಿದ್ದ ಮತ್ತೋರ್ವ ಬಾಲಕ ಗಾಯಗೊಂಡಿದ್ದರು. ಶ್ರೇಯಸ್ ಸ್ನೇಹಿತ ಪ್ರಣವ್ ಕೈಗೆ ಗಾಯವಾಗಿತ್ತು. ಸಂಜೆ ವೇಳೆ ಮನೆಯ ಮೇಲೆ ಹತ್ತಿದ ಬಾಲಕ ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದು, ಇನ್ನು ಗಾಯಗೊಂಡ ಪ್ರಣವ್ನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಧಾರವಾಡ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿತ್ತು.
ಈ ಕುರಿತು ಮೃತ ಬಾಲಕ ಶ್ರೇಯಸ್ ತಂದೆ ಅಶೋಕ ಶಿನ್ನೂರ ಮಾತನಾಡಿದ್ದು, "ಸಂಜೆ 5ಕ್ಕೆ ಶಾಲೆಯಿಂದ ಬಂದು ಮನೆಯಲ್ಲಿ ಮೊಬೈಲ್ ಹಿಡಿದು ಕುಳಿತಿದ್ದ, ಆಗ ಆಟ ಆಡಲು ಗೆಳೆಯ ಕರೆದಿದ್ದಾನೆ. ಆಗ ಹೊರಗೆ ಹೋಗಿದ್ದಾನೆ. ಇಬ್ಬರೂ ಪ್ರತಿದಿನ ಸಂಜೆ ಆಟ ಆಡುತ್ತಿದ್ದರು. ಚೆಂಡು ತೆಗೆದುಕೊಂಡು ಹೋಗಿದ್ದ ಆತ, ಹೋದ ಹತ್ತೇ ನಿಮಿಷದಲ್ಲಿ ಮಗ ಬಿದ್ದಿದ್ದಾನೆಂದು ಕರೆದರು" ಎಂದು ಘಟನೆ ಬಗ್ಗೆ ವಿವರಿಸಿದರು.
ಇದನ್ನೂ ಓದಿ :ಧಾರವಾಡ: ಆಟ ಆಡುವಾಗ ವಿದ್ಯುತ್ ತಂತಿ ತಗುಲಿ ಬಾಲಕ ಸಾವು, ಕಾಪಾಡಲು ಹೋದ ಗೆಳೆಯನಿಗೆ ಗಾಯ