ಬೆಳಗಾವಿ: ಕೃಷಿ ಕಾಯ್ದೆ ವಿರೋಧಿಸಿ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಟ್ರ್ಯಾಕ್ಟರ್ ಪರೇಡ್ ಮೂಲಕ ಚೆನ್ನಮ್ಮ ವೃತ್ತದ ಮಾರ್ಗವಾಗಿ ಜಿಲ್ಲಾ ಕ್ರೀಡಾಂಗಣದತ್ತ ತೆರಳುತ್ತಿದ್ದ ರೈತರ ಪರೇಡ್ನ್ನು ಪೊಲೀಸರು ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ತಡೆದರು. ಈ ವೇಳೆ ರೈತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.
ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ರೈತರು ತಾಲೂಕಿನ ಸುವರ್ಣಸೌಧ ಎದರು ಧ್ವಜಾರೋಹಣ ನೆರವೇರಿಸಿ, ಕೃಷಿ ಕಾಯ್ದೆ ವಿರೋಧಿಸಿ ಟ್ರ್ಯಾಕ್ಟರ್ ಪರೇಡ್ ಪ್ರಾರಂಭಿಸಿದ್ದು, ಮೊದಲು ಸಾಂಕೇತಿಕವಾಗಿ ಸುವರ್ಣಸೌಧ ಬಳಿ ಒಂದೇ ಟ್ರ್ಯಾಕ್ಟರ್ ತಂದಿದ್ದರು. ಬಳಿಕ ಒಂದೊಂದೇ ಟ್ರ್ಯಾಕ್ಟರ್‌ಗಳನ್ನು ತರುತ್ತಿದ್ದಾರೆ. ರಸ್ತೆಯುದ್ದಕ್ಕೂ ರೈತಪರ ಘೋಷಣೆ ಕೂಗುತ್ತಾ ಟ್ರ್ಯಾಕ್ಟರ್, ಖಾಸಗಿ ವಾಹನಗಳು ಹಾಗೂ ಬೈಕ್ ನಲ್ಲಿಯೂ ಜಿಲ್ಲಾ ಕ್ರೀಡಾಂಗಣದತ್ತ ರೈತರು ಪ್ರಯಾಣ ಬೆಳೆಸಿದರು.
ಟ್ರ್ಯಾಕ್ಟರ್ ಪರೇಡ್ಗೆ ಪೊಲೀಸರ ತಡೆ: ಜಿಲ್ಲಾ ಕ್ರೀಡಾಂಗಣಕ್ಕೆ ತೆರಳಲು ಅವಕಾಶ ನೀಡುವಂತೆ ಪಟ್ಟು ಹಿಡಿದ ಹಿನ್ನೆಲೆ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಟ್ರ್ಯಾಕ್ಟರ್ ಪರೇಡ್ ತಡೆ ಮಾಡಿದ ಪರಿಣಾಮ 20 ನಿಮಿಷಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಬಳಿಕ ಪೊಲೀಸರ ಯಾವುದೇ ಕಾರಣಕ್ಕೂ ಅವಕಾಶ ನೀಡೋದಿಲ್ಲ ಎನ್ನುತ್ತಿದ್ದಂತೆ ರೈತರು ಚನ್ನಮ್ಮ ವೃತ್ತದ ಮೂಲಕ ಟ್ರ್ಯಾಕ್ಟರ್ ಅಷ್ಟೇ ಅಲ್ಲದೇ ಕಾರು, ಕ್ರೂಸರ್, ಬೈಕ್‌ಗಳಲ್ಲಿ ಹೊರಟ ನೂರಾರು ರೈತರು ಹೊರಟರು. ಜಿಲ್ಲಾ ಕ್ರೀಡಾಂಗಣದತ್ತ ತೆರಳಲು ಅವಕಾಶ ನೀಡಲಿಲ್ಲ. ಹೀಗಾಗಿ ರೈತರು ಸರ್ದಾರ್ ಮೈದಾನದಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.