ಬೆಳಗಾವಿ:ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟ ನಿಲ್ಲದು. ರೈತರ ಹೋರಾಟ ಇನ್ನೊಂದು ಮಳೆಗಾಲ ಕಳೆದು ಬೇಸಿಗೆ ಆರಂಭಿಸಿದರೂ ಕೈ ಬಿಡುವುದಿಲ್ಲ ಎಂದು ಅಖಿಲ ಭಾರತ ಸಂಯುಕ್ತ ಕಿಸಾನ್ ಮೋರ್ಚಾ ಅಧ್ಯಕ್ಷ ರಾಕೇಶ್ ಸಿಂಗ್ ಟಿಕಾಯತ್ ಹೇಳಿದ್ದಾರೆ.
ಬೆಳಗಾವಿ ಪಟ್ಟಣದಲ್ಲಿ ನಡೆದ ರೈತ ಮಹಾಪಂಚಾಯತ್‌ನಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿದ ಅವರು, ರೈತ ಹೋರಾಟಕ್ಕೆ ದೆಹಲಿ, ಬೆಂಗಳೂರಿಗೆ ಹೋಗಬೇಕಿಲ್ಲ. ಹೋರಾಟಕ್ಕೆ ಸರ್ಕಾರದ ಅನುಮತಿಗಾಗಿ ಕಾಯುವುದು ಬೇಡ. 2021ರ ವರ್ಷ ಹೋರಾಟಗಳ ವರ್ಷ. ತಿದ್ದುಪಡಿ ಕಾಯ್ದೆ ಮರಳಿ ಪಡೆಯದೇ ಹೊರತು ಹೋರಾಟ ನಿಲ್ಲದು. 'ಏಕ್ ಟ್ರ್ಯಾಕ್ಟರ್ ಏಕ್ ಗಾಂವ್ ಔರ್ ಪಂದ್ರಾ ಆದ್ಮಿ' ಒಟ್ಟಾಗಿ ನಿಂತು ಹಳ್ಳಿಗಳಲ್ಲಿ ಧ್ವನಿ ಎತ್ತಿದರೆ ಹೋರಾಟಕ್ಕೆ ಜಯ ಸಿಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಖಿಲ ಭಾರತ ಸಂಯುಕ್ತ ಕಿಸಾನ್ ಮೋರ್ಚಾ ಮುಖಂಡ ಯುದ್ಧವೀರ ಸಿಂಗ್ ಮಾತನಾಡಿ, 125 ದಿನಗಳಿಂದ ದೆಹಲಿಯಲ್ಲಿ ಹೋರಾಟ ನಡೆಯುತ್ತಿದೆ. 20 ಸಾವಿರ ಟ್ರ್ಯಾಕ್ಟರ್ ಹೋರಾಟದಲ್ಲಿವೆ. 300 ಕ್ಕೂ ಅಧಿಕ ರೈತರು ಈಗಾಗಲೇ ಮೃತಪಟ್ಟಿದ್ದಾರೆ. ಆದರೂ ಸರ್ಕಾರ ರೈತರನ್ನು ಕಣ್ಣೆತ್ತಿಯೂ ನೋಡುತ್ತಿಲ್ಲ. ಮೋದಿ ಸರ್ಕಾರ ಕೃಷಿ ಕಾಯ್ದೆಗಳ ಮೂಲಕ ರೈತರ ಪಾಲಿನ ಅನ್ನದ ಚೀಲ ಕಿತ್ತುಕೊಳ್ಳುವ ವ್ಯವಸ್ಥಿತ ಯೋಜನೆ ರೂಪಿಸಿದೆ ಎಂದರು.