ಬೆಳಗಾವಿ :ಈ ಬಾರಿ ರಾಜ್ಯದಲ್ಲಿಕಂಡು ಕೇಳರಿಯದ ಬರಗಾಲದಿಂದ ಅಕ್ಷರಶಃ ರೈತರು ಕಂಗಾಲಾಗಿದ್ದಾರೆ. ಮುಂಗಾರು ಮಳೆ ಕೈ ಕೊಟ್ಟಿದ್ದರಿಂದ ಮುಂಗಾರು ಬೆಳೆ ಹಾನಿ ಅನುಭವಿಸಿದ್ದ ರೈತರು, ಇದೀಗ ಹಿಂಗಾರು ಬೆಳೆಗಳ ಹಾನಿ ಭೀತಿ ಎದುರಿಸುತ್ತಿದ್ದಾರೆ. ಅಲ್ಲದೇ ಜಾನುವಾರುಗಳ ಮೇವಿಗೂ ತಾತ್ವಾರ ಸ್ಥಿತಿ ನಿರ್ಮಾಣ ಆಗುವ ಸಾಧ್ಯತೆಯಿದೆ.
ಇಂತಹ ಸಂದರ್ಭದಲ್ಲಿ ಜಿಲ್ಲಾಡಳಿತವು, ಡಿಸೆಂಬರ್ 4ರಿಂದ ಚಳಿಗಾಲ ಅಧಿವೇಶನ ಆರಂಭವಾಗುತ್ತಿರುವ ಹಿನ್ನೆಲೆ ಸ್ವಚ್ಛತೆ ಹೆಸರಿನಲ್ಲಿ ಸುವರ್ಣ ವಿಧಾನಸೌಧ ಸುತ್ತಲೂ 10 ಏಕರೆಗೂ ಹೆಚ್ಚು ಪ್ರದೇಶದಲ್ಲಿ ಬೆಳೆದಿದ್ದ ಹುಲ್ಲನ್ನು ಜೆಸಿಬಿಗಳ ಮೂಲಕ ತೆಗೆಯಲಾಗುತ್ತಿದೆ. ಸದ್ಯ ಇದು ಹಲಗಾ, ಬಸ್ತವಾಡ, ಅಲಾರವಾಡ, ಕೊಂಡಸಕೊಪ್ಪ ಸೇರಿ ಸುತ್ತಲಿನ ಗ್ರಾಮಗಳ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಹಸಿರು ಹುಲ್ಲು ಇದ್ದಾಗಲೇ ಕಟಾವು ಮಾಡಿಕೊಳ್ಳಲು ಅನುಮತಿ ನೀಡುವಂತೆ ನಾವು ಮನವಿ ಮಾಡಿಕೊಂಡಿದ್ದೆವು. ಆದರೆ, ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು, ಜಿಲ್ಲಾಡಳಿತ ಸೊಪ್ಪು ಹಾಕಿಲ್ಲ ಎಂದು ರೈತರು ಆರೋಪಿಸಿದ್ದಾರೆ.
ರೈತ ಮುಖಂಡ ಪ್ರಕಾಶ ನಾಯಿಕ ಈಟಿವಿ ಭಾರತ ಜೊತೆಗೆ ಮಾತನಾಡಿ, 'ಮೂಕ ಪ್ರಾಣಿಗಳಿಗೆ ಆಹಾರ ಆಗಬೇಕಿದ್ದ ಮೇವನ್ನು ಹಾಳು ಮಾಡುತ್ತಿರುವುದು ನೋಡಿ ದುಃಖವಾಗುತ್ತಿದೆ. ಜಿಲ್ಲಾಡಳಿತ ಇನ್ನಾದರೂ ಎಚ್ಚೆತ್ತುಕೊಂಡು ಮೇವನ್ನು ರೈತರ ಜಾನುವಾರುಗಳಿಗೆ ನೀಡಬೇಕು' ಎಂದು ಆಗ್ರಹಿಸಿದರು.