ಬೆಳಗಾವಿ: ರೈತರಿಗೆ ಕಳಪೆ ಬೀಜ ವಿತರಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಕಳಪೆ ಬೀಜ ವಿತರಣೆ ಆರೋಪ: ಅಧಿಕಾರಿಗಳ ವಿರುದ್ಧ ಹಸಿರು ಸೇನೆಯಿಂದ ಪ್ರತಿಭಟನೆ - ಪ್ರತಿಭಟನೆ
ಬೈಲಹೊಂಗಲ ಹಾಗೂ ಕಿತ್ತೂರು ತಾಲೂಕಿನಲ್ಲಿ ರೈತರಿಗೆ ಕೃಷಿ ಇಲಾಖೆ ಮೂಲಕ ಕಳಪೆ ಸೋಯಾಬಿನ್ ಬೀಜಗಳನ್ನು ವಿತರಿಸಲಾಗಿತ್ತು ಎಂಬ ಆರೋಪ ಕೇಳಿಬಂದಿದೆ. ಇದರಿಂದ ರೈತರಿಗೆ ಸಾಕಷ್ಟು ಹಾನಿಯಾಗಿದ್ದು, ರೈತರಿಗೆ ಸರ್ಕಾರ ಪರಿಹಾರ ನೀಡಬೇಕೆಂದು ಒತ್ತಾಯಿಸಿ ರೈತರು ಧರಣಿ ನಡೆಸಿದರು.
ಜಿಲ್ಲಾಧಿಕಾರಿಗೆ ಮನವಿ ಮಾಡಿದ ರೈತ ಸಂಘದ ಪದಾಧಿಕಾರಿಗಳು, ರೈತರಿಗೆ ಕೃಷಿ ಇಲಾಖೆ ಮೂಲಕ ವಿತರಿಸಲಾದ ಸೋಯಾಬಿನ್ ಬೀಜಗಳು ಕಳಪೆ ಗುಣಮಟ್ಟದ್ದಾಗಿವೆ ಎಂದು ಆರೋಪಿಸಿದರು. ಅಲ್ಲದೆ, ಸರ್ಕಾರ ಕೂಡಲೇ ರೈತರಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು. ಇದೇ ವೇಳೆ ಕೆರೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಸುಳ್ಳು ದಾಖಲಾತಿ ಸೃಷ್ಟಿಸಿ ಭ್ರಷ್ಟಾಚಾರವೆಸಗಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ತಾಲೂಕು ಅಧ್ಯಕ್ಷ ರಾಜು ಮರವೆ, ಹನಮಂತ ಬಾಳೇಕುಂದ್ರಿ, ಅನಿಲ ಅನಗೋಳಕರ, ಭೂಮೇಶ ಬಿರ್ಜೆ, ರಮಾಕಾಂತ ಬಾಳೇಕುಂದ್ರಿ ಸೇರಿದಂತೆ ಇತರರು ಇದ್ದರು.