ಬೆಳಗಾವಿ: ಸಿಎಂ ಭೇಟಿ ಹಿನ್ನೆಲೆ ಸುವರ್ಣಸೌಧದ ಎದುರಿಗೆ ಪ್ರತಿಭಟನೆ ನಡೆಸಲು ಮುಂದಾಗಿದ್ದ ರೈತರನ್ನು ಪೊಲೀಸರು ವಶಕ್ಕೆ ಪಡೆದು ಹಿರೇಬಾಗೆವಾಡಿ ಠಾಣೆಗೆ ಕರೆದೊಯ್ದರು.
ಕೋವಿಡ್ ನಿರ್ವಹಣೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲು ಸಿಎಂ ಬಿ.ಎಸ್.ಯಡಿಯೂರಪ್ಪ ಇಂದು ಬೆಳಗ್ಗೆ 11 ಗಂಟೆಗೆ ಸುವರ್ಣಸೌಧದಲ್ಲಿ ಸಭೆ ನಡೆಸಲಿದ್ದಾರೆ. ಹೀಗಾಗಿ ಜಿಲ್ಲೆಯ ರೈತರು ಕಬ್ಬಿನ ಬಾಕಿ ಬಿಲ್ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸುವರ್ಣಸೌಧದ ಮುಂದೆ ಪ್ರತಿಭಟನೆಗೆ ಮುಂದಾಗಿದ್ದರು. ಈ ವೇಳೆ ಪ್ರತಿಭಟನೆ ಕೈಬಿಡುವಂತೆ ಮನವೊಲಿಸಲು ಮುಂದಾದ ಪೊಲೀಸರು ಹಾಗೂ ರೈತರ ಮಧ್ಯೆ ವಾಗ್ವಾದ ನಡೆಯಿತು. ಬಳಿಕ ಪೊಲೀಸರು ರೈತ ಮುಖಂಡರನ್ನ ವಶಕ್ಕೆ ಪಡೆದು ಹಿರೇಬಾಗೆವಾಡಿ ಪೊಲೀಸ್ ಠಾಣೆಗೆ ಒಯ್ದರು. ಈ ವೇಳೆ ರೈತರು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರೈತ ಮುಖಂಡರು ಮಾತನಾಡಿ, ರಾಜ್ಯದಲ್ಲಿ ಅಂದಾಜು 1500 ಕೋಟಿ ಕಬ್ಬಿನ ಬಿಲ್ ಬಾಕಿಯಿದೆ. ತರಕಾರಿ ಬೆಳೆದ ರೈತರು ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಸಿಎಂ ಭೇಟಿಯಾಗಿ ಪರಿಹಾರ ಕೇಳಲು ಬಂದಿದ್ದೇವೆ. ಅವರನ್ನು ಬಿಟ್ಟು ನಾವು ಯಾರನ್ನ ಕೇಳೋದು ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.