ಕರ್ನಾಟಕ

karnataka

ETV Bharat / state

ಬೆಳಗಾವಿ-ಗೋವಾ ರಾಷ್ಟ್ರೀಯ ಹೆದ್ದಾರಿ ತಡೆದು ರೈತರ ಪ್ರತಿಭಟನೆ, ಟೋಲ್ ಫ್ರೀಗೆ ಆಗ್ರಹ

ಖಾನಾಪುರ ತಾಲೂಕಿನ ಗಣೆಬೈಲ್ ಟೋಲ್ ಬಂದ್ ಮಾಡಿ ರೈತರು ಪ್ರತಿಭಟಿಸಿದರು. ಕೆಲಕಾಲ ವಾಹನ ಸಂಚಾರಕ್ಕೆ ತೊಡಕುಂಟಾಗಿ ಪ್ರಯಾಣಿಕರು ಪರದಾಡಿದರು.

Farmers protest
ಹೆದ್ದಾರಿ ತಡೆದು ರೈತರು ಪ್ರತಿಭಟನೆ ನಡೆಸಿದರು.

By ETV Bharat Karnataka Team

Published : Oct 5, 2023, 6:34 PM IST

Updated : Oct 5, 2023, 10:29 PM IST

ಬೆಳಗಾವಿ-ಗೋವಾ ರಾಷ್ಟ್ರೀಯ ಹೆದ್ದಾರಿ ತಡೆದು ರೈತರ ಪ್ರತಿಭಟನೆ

ಬೆಳಗಾವಿ: ರಾಷ್ಟ್ರೀಯ ಹೆದ್ದಾರಿ ರಸ್ತೆ ಪೂರ್ಣಗೊಳ್ಳುವ ಮುನ್ನ ಟೋಲ್ ವಸೂಲಿ ಮಾಡುವುದನ್ನು ವಿರೋಧಿಸಿ ಇಂದು ಬೆಳಗಾವಿ-ಗೋವಾ ರಾಷ್ಟ್ರೀಯ ಹೆದ್ದಾರಿ ತಡೆದ ರೈತರು, ಆಕ್ರೋಶ ವ್ಯಕ್ತಪಡಿಸಿದರು. ಖಾನಾಪುರ ತಾಲೂಕಿನ ಗಣೆಬೈಲ್ ಟೋಲ್ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಖಾನಾಪುರ ತಾಲೂಕಿನ ರೈತರಿಗೆ ಟೋಲ್ ವಿನಾಯಿತಿ ನೀಡಬೇಕು‌. ರಸ್ತೆಗಾಗಿ ಜಮೀನು ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ಈವರೆಗೆ ನೂರಾರು ರೈತರಿಗೆ ಸರಿಯಾದ ಪರಿಹಾರ ಸಿಕ್ಕಿಲ್ಲ. ತಕ್ಷಣ ಎಲ್ಲರಿಗೂ ಪರಿಹಾರ ನೀಡಬೇಕೆಂದು ಆಗ್ರಹಿಸಿ ಒಂದು ಗಂಟೆ ಕಾಲ‌ ಹೆದ್ದಾರಿ ಬಂದ್ ಮಾಡಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ರೈತ ಮುಖಂಡ ಪ್ರಕಾಶ ನಾಯಿಕ ಮಾತನಾಡಿ, "ಮಾರುಕಟ್ಟೆ ದರದ ಪ್ರಕಾರ ರೈತರ ಜಮೀನುಗಳಿಗೆ ಪರಿಹಾರ ನೀಡಬೇಕು. ಲೋಕ ಅದಾಲತ್ ಮಾದರಿಯಲ್ಲಿ ಎಲ್ಲ ಇಲಾಖೆಗಳ ಅಧಿಕಾರಿಗಳನ್ನೂ ಒಂದೆಡೆ ಸೇರಿಸಿ ಭೂಮಿ ಕಳೆದುಕೊಂಡ ರೈತರ ಖಾತೆಗಳಿಗೆ ಏಕಕಾಲಕ್ಕೆ ಹಣ ಜಮೆ ಮಾಡಬೇಕು. ಅದೇ ರೀತಿ ಖಾನಾಪುರ ತಾಲೂಕಿನ ಎಲ್ಲ ಜನರಿಗೂ ಟೋಲ್ ಉಚಿತ ಮಾಡಬೇಕು" ಎಂದು ಆಗ್ರಹಿಸಿದರು.

ಭೂಸ್ವಾಧೀನ ಅಧಿಕಾರಿ ಬಲರಾಮ್ ಚವ್ಹಾಣ ಪ್ರತಿಕ್ರಿಯಿಸಿದ್ದು, "2011-12ರಲ್ಲಿ ಅಧಿಸೂಚನೆ ಹೊರಡಿಸಿದ ಪ್ರಕಾರ ಆಗಿನ ದರ ನಿಗದಿಪಡಿಸಲಾಗಿದೆ. ಹಾಗಾಗಿ ಮೊದಲು ಈ ಹಣವನ್ನು ತೆಗೆದುಕೊಳ್ಳಿ. ಆಮೇಲೆ ಹೆಚ್ಚಿನ ಹಣಕ್ಕೆ ಬೇಡಿಕೆ ಇಡಿ. ಅದನ್ನು ಬಿಟ್ಟು ಈಗಿನ ದರವನ್ನೇ ಕೊಡುವಂತೆ ಪಟ್ಟು ಹಿಡಿದರೆ, ಆ ರೀತಿ ಪರಿಹಾರ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ" ಎಂದು ಸ್ಪಷ್ಟಪಡಿಸಿದರು.

ಮತ್ತೊಮ್ಮೆ ಸಮೀಕ್ಷೆ ಮಾಡಿ, ನಿರ್ದಿಷ್ಟವಾಗಿ ಎಷ್ಟು ರೈತರ ಜಮೀನು ರಾಷ್ಟ್ರೀಯ ಹೆದ್ದಾರಿಗೆ ಹೋಗಿದೆ ಎಂಬುದನ್ನು ಖಾತ್ರಿಪಡಿಸಿಕೊಂಡು, ಸಂತ್ರಸ್ತ ರೈತರಿಗೆ ಪರಿಹಾರ ನೀಡುವುದು ಮತ್ತು ಅವರ ಉಳಿದ ಜಮೀನನ್ನು ರೈತರ ಹೆಸರಿಗೆ ಹಿಸಾ ಮಾಡಿಕೊಡುವುದಾಗಿ ಭರವಸೆ ನೀಡಿದ ಅವರು, ತಲಾಟಿ ಮೂಲಕ 7 ದಿನಗಳ ಮುಂಚಿತವಾಗಿ ರೈತರಿಗೆ ನೊಟೀಸ್ ನೀಡಿ ಸಮೀಕ್ಷೆ ಮಾಡಲಾಗುವುದು ಎಂದರು.

ಸ್ಥಳಕ್ಕೆ ಬೆಳಗಾವಿ ಉಪ ವಿಭಾಗಾಧಿಕಾರಿ ಶ್ರವಣ ನಾಯಿಕ ಸೇರಿ ವಿವಿಧ ಅಧಿಕಾರಿಗಳು ಭೇಟಿ ನೀಡಿದರು. ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿದ್ದರಿಂದ ವಾಹನ ಸಂಚಾರ ಸ್ಥಗಿತಗೊಂದು ಕೆಲಕಾಲ ಪ್ರಯಾಣಿಕರು ಪರದಾಡುವಂತಾಯಿತು. ಖಾನಾಪುರ, ನಂದಗಡ ಠಾಣೆ ಪೊಲೀಸರು ಬಂದೋಬಸ್ತ್ ಕೈಗೊಂಡಿದ್ದರು.

ಇದನ್ನೂಓದಿ:ನಿಲ್ಲದ ಕಾವೇರಿ ಕಿಚ್ಚು : ಕೆಆರ್​ಎಸ್​ ಡ್ಯಾಂ ಮುತ್ತಿಗೆಗೆ ಹೊರಟ ಕನ್ನಡಪರ ಸಂಘಟನೆಗಳು

Last Updated : Oct 5, 2023, 10:29 PM IST

ABOUT THE AUTHOR

...view details