ಚಿಕ್ಕೋಡಿ (ಬೆಳಗಾವಿ):ಪೂರ್ವ ಮುಂಗಾರಿನಲ್ಲಿ ವಾಡಿಕೆಯಂತೆ ಮಳೆ ಕೊರತೆಯಾದರೂ ಸಹಿತ ಗಡಿ ಭಾಗದ ಜನತೆ ಬಿತ್ತನೆಯ ಕಾರ್ಯದಲ್ಲಿ ತೊಡಗಿದ್ದಾರೆ. ಕೊರೊನಾ ಹಾವಳಿಯಿಂದ ರೈತರು ಬೆಳೆದ ಬೆಳೆಗೆ ಸರಿಯಾದ ಮಾರುಕಟ್ಟೆ ಸಿಕ್ಕಿರಲಿಲ್ಲ. ಅದಾಗ್ಯೂ ಎದೆಗುಂದದ ಗಡಿ ಭಾಗದ ರೈತರು ಮುಂಗಾರಿನ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ.
ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ರೈತರು ಕಳೆದ ವರ್ಷ ಪೂರ್ವ ಮುಂಗಾರಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರದಿದೆ. ಆದರೆ, ಈ ಬಾರಿ ಇನ್ನು ವಾಡಿಕೆಯಷ್ಟೂ ಕೂಡ ಮಳೆ ಸುರದಿಲ್ಲ. ಆದರೆ, ಜೂನ್ ಮೊದಲ ವಾರದಲ್ಲಿ ಮಳೆ ಸುರಿಯುವ ನಿರೀಕ್ಷೆ ಇರುವ ಹಿನ್ನೆಲೆ ರೈತರು ಬಿತ್ತನೆ ಕಾರ್ಯಕ್ಕೆ ಮುಂದಾಗಿದ್ದಾರೆ.
ಮೇ.25 ರಿಂದ ಜೂ. 7ರ ವರೆಗಿನ ಅವಧಿಯಲ್ಲಿ ರೋಹಿಣಿ ಮಳೆ ಆಗುವ ನಿರೀಕ್ಷೆ ಇದೆ. ಆದರೆ, ಇನ್ನು ಕೂಡ ಚಿಕ್ಕೋಡಿ ಉಪವಿಭಾಗದಲ್ಲಿ ರೋಹಿಣಿ ಮಳೆ ಆಗದೆ ಇರುವುದರಿಂದ ಕೆಲ ರೈತರು ಬಿತ್ತನೆಗೆ ಮುಂದಾಗಿಲ್ಲ. ಇನ್ನು ವಾಡಿಕೆಯಂತೆ ಜೂನ್ ಮೊದಲ ವಾರದಲ್ಲಿ ಮಳೆಯಾದರೆ ಮತ್ತಷ್ಟು ರೈತರು ಬಿತ್ತನೆಗೆ ಮುಂದಾಗುತ್ತಾರೆ.
ಚಿಕ್ಕೋಡಿ ಉಪವಿಭಾಗದಲ್ಲಿ ಈಗಾಗಲೇ ಕೆಲ ರೈತರು ಕಬ್ಬು ನಾಟಿ ಪ್ರಾರಂಭಿಸಿದ್ದಾರೆ. ಆದರೆ, ಇನ್ನು ಕೆಲ ರೈತರು ಮಳೆಯ ನೀರಿಕ್ಷೆಯಲ್ಲೇ ಕಾಯುತ್ತಾ ಕುಳಿತಿದ್ದಾರೆ. ಹಲವಡೆ ಹೆಸರು, ಶೇಂಗಾ, ಉದ್ದು, ಗೋವಿನ ಜೋಳ, ಅರಿಶಿನ, ಸೊಯಾಬಿನ, ಈರುಳ್ಳಿ, ತಂಬಾಕು, ಬೆಳೆಯಲು ರೈತರು ಜಮೀನು ತಯಾರಿ ನಡೆಸಿದ್ದು, ನೀರಿನ ಸೌಲಭ್ಯ ಹೊಂದಿದ್ದ ಕೆಲ ರೈತರು ಬಿತ್ತನೆ ಕಾರ್ಯ ಮುಗಿಸಿದ್ದಾರೆ.