ಬೆಳಗಾವಿ : ಕೇಂದ್ರ ಬರ ಅಧ್ಯಯನ ತಂಡವು ತಮ್ಮ ಅಳಲು ಕೇಳಲಿಲ್ಲ ಎಂದು ಆರೋಪಿಸಿ ರೈತರೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೈಲಹೊಂಗಲ ತಾಲೂಕಿನ ಕಲಕುಪ್ಪಿಯಲ್ಲಿ ಇಂದು ಬೆಳಗ್ಗೆ ನಡೆದಿದೆ.
ಸವದತ್ತಿ ತಾಲೂಕಿನ ಇಂಚಲ ಗ್ರಾಮದ ಅಪ್ಪಾಸಾಹೇಬ ಲಕ್ಕುಂಡಿ ಆತ್ಮಹತ್ಯೆಗೆ ಯತ್ನಿಸಿದ ರೈತ. ಕೇಂದ್ರದ ಅಧಿಕಾರಿಗಳು ಕಲಕುಪ್ಪಿಯಲ್ಲಿ ಕೆಲವು ರೈತರ ಸಮಸ್ಯೆ ಆಲಿಸಿ, ಸವದತ್ತಿ ತಾಲೂಕಿನ ಚಚಡಿ ಕಡೆ ತೆರಳಿದರು. ಇದರಿಂದ ಆಕ್ರೋಶಗೊಂಡ ರೈತ ಅಪ್ಪಾಸಾಹೇಬ ಕೀಟನಾಶಕದ ಬಾಟಲಿ ಕೈಯಲ್ಲಿ ಹಿಡಿದುಕೊಂಡು ಆತ್ಮಹತ್ಯೆಗೆ ಮುಂದಾದರು. ತಕ್ಷಣವೇ ಸ್ಥಳದಲ್ಲಿದ್ದ ಪೊಲೀಸರು ಎಚ್ಚೆತ್ತುಕೊಂಡು ಆತನ ಕೈಯಲ್ಲಿದ್ದ ಕೀಟನಾಶಕ ಬಾಟಲಿ ಕಸಿದು ಕೊಂಡರು.
ಇದೇ ವೇಳೆ ಮಾತನಾಡಿದ ರೈತ ಅಪ್ಪಾಸಾಹೇಬ ಲಕ್ಕುಂಡಿ, 40 ಎಕರೆಯಲ್ಲಿ ಶೇಂಗಾ, ಹುರಳಿ, ಸೋಯಾಬೀನ್ ಬೆಳೆದಿದ್ದೇನೆ. ಮಳೆ ಕೊರತೆಯಿಂದಾಗಿ ಬೆಳೆಗಳು ಸಂಪೂರ್ಣ ಹಾನಿಯಾಗಿವೆ. ಇಷ್ಟೆಲ್ಲ ಸಮಸ್ಯೆಯಲ್ಲಿದ್ದರೂ, ಯಾವೊಬ್ಬ ಅಧಿಕಾರಿಯೂ ನಮ್ಮ ಕಡೆ ಬಂದು ಸಮಸ್ಯೆ ಆಲಿಸಿಲ್ಲ. ಸರ್ಕಾರ ರೈತರಿಗೆ ಯಾವುದೇ ಗ್ಯಾರಂಟಿ ನೀಡದೇ ಇದ್ದರಿಂದ ಆತ್ಮಹತ್ಯೆಗೆ ಯತ್ನಿಸಿದೆ. ಸರ್ಕಾರ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಬರ ಅಧ್ಯಯನ ತಂಡದ ಮುಂದೆ ಅಳಲು ತೋಡಿಕೊಂಡ ರೈತರು : ಈ ಬಾರಿ ರಾಜ್ಯದೆಲ್ಲೆಡೆ ಸಮಯಕ್ಕೆ ಸರಿಯಾಗಿ ಮುಂಗಾರು ಆಗದೇ ರೈತರ ಹೊಲ, ಗದ್ದೆಗಳಲ್ಲಿ ಬರದ ಕಪ್ಪು ಛಾಯೆ ಆವರಿಸಿದೆ. ಹೀಗಾಗಿ ಗದಗ ಜಿಲ್ಲೆಯ ವಿವಿಧ ಕಡೆ ಭೇಟಿ ನೀಡಿದ ಕೇಂದ್ರ ಬರ ಅಧ್ಯಯನ ಸಮಿತಿ ಎದುರು ಜಿಲ್ಲೆಯ ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ.