ಬೆಳಗಾವಿ:ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದು ಮಂಡಿಸಿದ ಬಜೆಟ್ ರೈತ ಸಮುದಾಯಕ್ಕೆ ತೀವ್ರ ನಿರಾಶೆ ಮೂಡಿಸಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಬೇಸರ ವ್ಯಕ್ತಪಡಿಸಿದರು.
ಕೇಂದ್ರ ಬಜೆಟ್ ರೈತ ಸಮುದಾಯಕ್ಕೆ ಆಶಾದಾಯಕವಾಗಿಲ್ಲ: ಕುರುಬೂರು ಶಾಂತಕುಮಾರ್ - ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ಬಜೆಟ್ ರೈತ ಸಮುದಾಯಕ್ಕೆ ತೀವ್ರ ನಿರಾಶೆ ಮೂಡಿಸಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಬೇಸರ ವ್ಯಕ್ತಪಡಿಸಿದರು.
ಬೆಳಗಾವಿಯಲ್ಲಿ ಈಟಿವಿ ಭಾರತಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರೈತರ ಆದಾಯ ದ್ವಿಗುಣಗೊಳಿಸುವುದಾಗಿ ಕಳೆದ ನಾಲ್ಕು ವರ್ಷಗಳಿಂದ ಕೇಂದ್ರದ ನಾಯಕರು ಹೇಳುತ್ತಾ ಬಂದಿದ್ದಾರೆ. ಈ ವರ್ಷ ಆದಾಯ ದ್ವಿಗುಣ ಸೇರಿ 16 ಅಂಶಗಳ ಕಾರ್ಯಕ್ರಮ ಜಾರಿಗೆ ತರುವುದಾಗಿ ಘೋಷಿಸಿದ್ದಾರೆ. ಆದರೆ ಇವು ಜಾರಿಗೆ ಬರುವುದು ಯಾವಾಗ? ಇವುಗಳಿಂದ ರೈತ ಸಮುದಾಯಕ್ಕೆ ಆಗುವ ಲಾಭ ಏನು ಎಂಬುವುದು ನಮ್ಮ ಪ್ರಶ್ನೆ. ಸ್ವಾಮಿನಾಥನ್ ವರದಿ ಪ್ರಕಾರ ರೈತರಿಗೆ ಬೇಕಾದ ಬೆಂಬಲ ಬೆಲೆ ನೀಡುವ ವಿಚಾರ, ಕೃಷಿ ಸಾಲ ನೀತಿಯನ್ನು ಬಜೆಟ್ನಲ್ಲಿ ಪ್ರಸ್ತಾಪಿಸಿಲ್ಲ. ರೈತರ ಆದಾಯ ದ್ವಿಗುಣಗೊಳಿಸುವ ಹೇಳಿಕೆ ಕೇವಲ ರೈತರ ಕಣ್ಣಿಗೆ ಬೆಣ್ಣೆ ಸವರುವ ಕೆಲಸವಾಗಿದೆ.
ಭಾರತದಲ್ಲಿ ಶೇ. 70ರಷ್ಟು ಕೃಷಿಕರಿದ್ದು, ಹೆಚ್ಚಿನ ಅನುದಾನ ಕೃಷಿ ಕ್ಷೇತ್ರಕ್ಕೆ ಇಡಬೇಕಾಗಿತ್ತು. ಕನಿಷ್ಠ 10 ಲಕ್ಷ ಕೋಟಿ ರೂ. ನೀಡಬೇಕಿತ್ತು. ಆದರೆ 2.83 ಲಕ್ಷ ಕೋಟಿ ರೂ. ಮಾತ್ರ ಕೃಷಿ ಕ್ಷೇತ್ರಕ್ಕೆ ಮೀಸಲಿಡಲಾಗಿದ್ದು, ರೈತ ಸಮುದಾಯ ನಿರಾಶೆ ಅನುಭವಿಸುವಂತಾಗಿದೆ. ಫಸಲ್ ಭೀಮಾ ಯೋಜನೆಯಲ್ಲಿ ಹಲವು ತಿದ್ದುಪಡಿ ಆಗಬೇಕು ಎಂಬ ಒತ್ತಾಯದ ಬಗ್ಗೆಯೂ ಬಜೆಟ್ನಲ್ಲಿ ಯಾವುದೇ ಸ್ಪಷ್ಟತೆ ನೀಡಲಾಗಿಲ್ಲ. ಬರಡು ಭೂಮಿಯಲ್ಲಿ ಸೋಲಾರ್ ಘಟಕ ಸ್ಥಾಪಿಸಲು ಉತ್ತೇಜನ ಹಾಗೂ ಮಹಿಳೆಯರ ಮೂಲಕ ಧಾನ್ಯಗಳನ್ನು ಮಾರಾಟ ಮಾಡಿಸುವುದು ಸ್ವಲ್ಪ ಮಟ್ಟಿಗೆ ಲಾಭ ತರುವ ಯೋಜನೆಗಳು. ಆದರೆ ಹೆಚ್ಚಿನ ಪ್ರಮಾಣದಲ್ಲಿ ಕೃಷಿ ಕ್ಷೇತ್ರಕ್ಕೆ ಆದ್ಯತೆ ನೀಡಿಲ್ಲ. ಹೀಗಾಗಿ ರೈತ ಸಮುದಾಯಕ್ಕೆ ಈ ಬಜೆಟ್ ನಿರಾಶೆ ಮೂಡಿಸಿದೆ ಎಂದರು.