ಚಿಕ್ಕೋಡಿ (ಬೆಳಗಾವಿ): ಯಾರ ಅದೃಷ್ಟ ಹೇಗೆ ಬದಲಾಗುತ್ತದೆ ಎಂದು ಹೇಳುವುದು ಕಷ್ಟಸಾಧ್ಯ. ಆದ್ರೆ ಅದೃಷ್ಟ ಖುಲಾಯಿಸಿತು ಅಂದ್ರೆ ಕಷ್ಟ ಕಾರ್ಪಣ್ಯಗಳಿಂದ ಮುಕ್ತನಾಗಿ ತಾನು ಜೀವಿಸುವಷ್ಟು ಕಾಲ ಐಷಾರಾಮಿ ಜೀವನ ಸಾಗಿಸಬಹುದು ಎನ್ನುವುದಕ್ಕೆ ಇಲ್ಲೊಬ್ಬ ರೈತರೊಬ್ಬರು ತಾಜಾ ಉದಾಹರಣೆ. ಸದ್ಯ ಟೊಮೆಟೊಗೆ ಚಿನ್ನದ ಬೆಲೆ ಇದ್ದು, ಅದೃಷ್ಟ ರೈತನ ಕೈ ಹಿಡಿದಿದೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಗ್ರಾಮದ ರೈತ ಸಾಗರ ಗೋಪಾಲ ಮಗದುಮ್ ಎಂಬುವರು ಒಂಬತ್ತು ಎಕರೆ ಪ್ರದೇಶದಲ್ಲಿ ಟೊಮೆಟೊ ಬೆಳೆದು ಈಗ ಕೋಟ್ಯಾಧಿಪತಿ ಆಗಿದ್ದಾರೆ. ತಮ್ಮ ಸ್ವಂತ ಜಮೀನು ಎರಡು ಎಕರೆ ಹಾಗೂ ಪಕ್ಕದ ರೈತರ ಏಳು ಎಕರೆ ಜಮೀನನ್ನು ಗೇಣಿ ಪಡೆದು ಒಟ್ಟು 9 ಎಕರೆ ಪ್ರದೇಶದಲ್ಲಿ ಟೊಮೆಟೊ ಬೆಳೆದು ಜಿಲ್ಲೆಯ ಮಾದರಿ ರೈತನಾಗಿ ಎಲ್ಲರ ಗಮನ ಸೆಳೆದಿದ್ದಾರೆ.
ಮೂಲತಃ ಪಕ್ಕದ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಉಮನವಾಡಿಯ ಗ್ರಾಮ ಇವರ ಊರು. ಆದರೆ ಕಳೆದ 30 ವರ್ಷಗಳಿಂದ ಯಕ್ಸಂಬಾ ಪಟ್ಟಣದಲ್ಲಿ ವಾಸವಿದ್ದು ಪ್ರತಿ ವರ್ಷವೂ ವಿವಿಧ ಬೆಳೆಗಳನ್ನು ಬೆಳೆಯುತ್ತ ಜೀವನ ಕಟ್ಟಿಕೊಂಡಿದ್ದಾರೆ. ಈ ವರ್ಷ ಒಂಬತ್ತು ಎಕರೆ ಪ್ರದೇಶದಲ್ಲಿ ಟೊಮೆಟೊ ಬೆಳೆ ಬೆಳೆದು ಕೋಟ್ಯಂತರ ರೂಪಾಯಿ ಲಾಭ ಪಡೆಯಲಿದ್ದಾರೆ. ಎಕರೆಗೆ ಟನ್ಗಟ್ಟಲೇ ಇಳುವರಿ ಬಂದು ಅತ್ಯುತ್ತಮ ದರ ಸಿಕ್ಕಿದೆ. ಟೊಮೆಟೊ ಬೆಳೆಯಿಂದ ಬಂಪರ್ ಲಾಭ ಕೈಗೆ ಸಿಕ್ಕಿದ್ದು ರೈತನ ಮೊಗದಲ್ಲಿ ಮಂದಹಾಸದ ಜೊತೆಗೆ ಸಂತೃಪ್ತಿ ಎದ್ದು ಕಾಣುತ್ತಿದೆ.
ಸದ್ಯ ದೇಶಾದ್ಯಂತ ಟೊಮೆಟೊಗೆ ಬಂಪರ್ ಬೆಲೆ ಸಿಗುತ್ತಿದೆ. ಇನ್ನೂ ಒಂದು ತಿಂಗಳು ದರ ಏರಿಕೆ ಇಳಿಯುವ ಲಕ್ಷಣಗಳು ಕಾಣುತ್ತಿಲ್ಲ. ರೈತರ ಹೊಲಕ್ಕೆ ದಲ್ಲಾಳಿಗಳು ಬಂದು ಟೊಮೆಟೊ ಖರೀದಿಸಿ ಒಯ್ಯುತ್ತಿದ್ದಾರೆ. ಈಗಾಗಲೇ ಅರ್ಧ ಕೊಯ್ಲು ಆಗಿದೆ, ಇನ್ನೂ ಅರ್ಧ ಕೊಯ್ಲು ಬಾಕಿ ಉಳಿದಿದ್ದು ಉತ್ತಮ ಆದಾಯದ ನಿರೀಕ್ಷೆಯಲ್ಲಿ ರೈತ ಮಗದುಮ್ ಇದ್ದಾರೆ.