ಕಿತ್ತೂರ(ಬೆಳಗಾವಿ):ಕೊರೊನಾದಂತ ಸಂದಿಗ್ಧ ಪರಿಸ್ಥಿತಿಯನ್ನೇ ಅಸ್ತ್ರವನ್ನಾಗಿಸಿದ ಕೆಲವರು ದುಪ್ಪಟ್ಟು ದರದಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದರೆ ಇಲ್ಲೊಬ್ಬ ರೈತ ಹೊಲದಲ್ಲಿ ಬೆಳೆದ ತರಕಾರಿಯನ್ನ ಊರ ಜನರಿಗೆ ಪುಕ್ಕಟೆ ಹಂಚಿ ಮಾನವೀಯತೆ ಮೆರೆದಿದ್ದಾನೆ.
ಕೊರೊನಾ ಸಂಕಷ್ಟಕ್ಕೆ ಮಿಡಿದ ರೈತನ ಹೃದಯ... ಊರಿನವರಿಗೆ ಪುಕ್ಕಟೆ ತರಕಾರಿ ಭಾಗ್ಯ ಬೆಳಗಾವಿ ಜಿಲ್ಲೆಯ ಚನ್ನಮ್ಮನ ಕಿತ್ತೂರು ರೈತ ಚಂದ್ರಶೇಖರಯ್ಯಾ ತನ್ನ ಹೊಲದಲ್ಲಿನ ಅಪಾರ ಪ್ರಮಾಣದಲ್ಲಿ ತರಕಾರಿ ಬೆಳೆದಿದ್ದಾರೆ. ಆದರೆ ಕೂಲಿ, ವಾಹನ ಬಾಡಿಗೆ, ದಲ್ಲಾಳಿಗಳ ಕಾಟ ಒಂದೆಡೆಯಾದ್ರೆ.. ತರಕಾರಿ ತರಲು ಹೋಗಿ ಪೋಲಿಸರ ಬೆತ್ತದ ರುಚಿ ಸವಿಯುವ ಜನಸಾಮಾನ್ಯರು ಮತ್ತೊಂದೆಡೆ. ಈ ಸಂದಿಗ್ಧ ಪರಿಸ್ಥಿತಿಯನ್ನೆ ಅಸ್ತ್ರವನ್ನಾಗಿಸಿದ ಕೆಲವರು ದುಪ್ಪಟ್ಟು ದರದಲ್ಲಿ ಮನೆ-ಮನೆಗೆ ತರಕಾರಿ ಮಾರಾಟ ಮಾಡುತ್ತಿದ್ದಾರೆ. ಇದ್ರಿಂದ ರೋಸಿ ಹೋದ ರೈತ ಚಂದ್ರಶೇಖರಯ್ಯಾ ತರಕಾರಿಗಳನ್ನು ಊರ ಜನರಿಗೆ ಹಣ ಪಡೆಯದೇ ನೀಡುತ್ತಿದ್ದಾರೆ.
ಬದನೇಕಾಯಿ, ಮೆಣಸಿನಕಾಯಿ, ಕುಂಬಳಕಾಯಿ ಹಾಗೂ ಗೋವಿನ ಜೋಳವನ್ನು ಅಧಿಕ ಪ್ರಮಾಣದಲ್ಲಿ ಬೆಳೆದಿದ್ದರು. ಆದರೆ ಕೊರೋನಾ ಹೊಡೆತದಿಂದ ಸಂತೆಗಳು ಬಂದ್ ಆಗಿರುವ ಹಿನ್ನೆಲೆ ಶಹರಗಳಿಗೆ ಸಾಗಿಸಬೇಕೆಂದರೆ ದಲ್ಲಾಳಿಗಳು ಅಗ್ಗದ ದರಕ್ಕೆ ಬೇಡುತ್ತಿದ್ದಾರೆ. 100 ಕ್ಕೆ 10 ದಲ್ಲಾಳಿಗಳ ಕಮೀಷನ್ ಆಗಿದ್ದು.. ನೂರಕ್ಕೆ 5 ರೂ. ಹಮಾಲಿಗಳಿಗೆ ಕೊಡಬೇಕು.. ಇಷ್ಟೆಲ್ಲಾ ಆದಮೇಲೆ ಮಿಕ್ಕುವುದು ಬಂಡವಾಳದ ಲಾಭವೂ ಇಲ್ಲ.. ಹಾಗಾಗಿ ಕೊರೊನಾದಿಂದ ತತ್ತರಿಸಿರುವ ಜನತೆಯಾದ್ರೂ ತಿನ್ನಲಿ ಅಂತ ಫ್ರೀಯಾಗಿ ತರಕಾರಿ ನೀಡುತ್ತಿದ್ದೇನೆ ಎಂದು ರೈತ ಚಂದ್ರಶೇಖರ್ ಹೇಳಿದ್ದಾರೆ.
ಕೊರೊನಾ ತಂದ ಕಂಟಂಕದಿಂದ ರೈತರು ವರ್ಷವಿಡೀ ಬೆವರು ಸುರಿಸಿ ದುಡಿದು ಇದೀಗ ಕಣ್ಣೀರಲ್ಲಿ ಕೈ ತೊಳೆಬೇಕಾಗಿದೆ.. ಇಂತಹ ಸಂಕಟದ ನಡುವೆಯೂ ಜನರಿಗೆ ತರಕಾರಿ ನೀಡಿ ಮಾನವೀಯತೆ ಮೆರೆಯುವ ಜೊತೆಗೆ ತಮ್ಮ ತಮ್ಮ ಗ್ರಾಮಗಳನ್ನು ಕಾಪಾಡಿಕೊಳ್ಳುವಲ್ಲಿ ರೈತರು ಪಾತ್ರವಹಿಸಿದ್ದು ನಿಜಕ್ಕೂ ಹೆಮ್ಮೆಯ ವಿಷಯ.