ಬೆಳಗಾವಿ: ರೈತರಿಗೆ ಅನ್ಯಾಯ ಆಗಲು ಬಿಡುವುದಿಲ್ಲ, ಕಂಪನಿ ಹೆಸರಲ್ಲಿ ಭೂಮಿ ಪಡೆದು ರಿಯಲ್ ಎಸ್ಟೇಟ್ ವ್ಯವಹಾರ ನಡೆಸಲು ಅವಕಾಶ ಕೊಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಡೂರಿನ ರೈತ ನಿಯೋಗಕ್ಕೆ ತಿಳಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಸಂಡೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕುಡುತಿನಿಯಲ್ಲಿ ಅರ್ಸೆಲರ್ ಮಿತ್ತಲ್ ಇಂಡಿಯಾ ಲಿ, ಉತ್ತಮ್ ಗಾಲ್ವಾ ಫೆರೋಸ್ ಕಂಪನಿ ಲಿ. ಹಾಗೂ ಮೆ. ಕರ್ನಾಟಕ ವಿಜಯನಗರ ಸ್ಟೀಲ್ಸ್ ಲಿಮಿಟೆಡ್ ಕಾರ್ಖಾನೆಗಳನ್ನು ಪ್ರಾರಂಭಿಸುವ ಕುರಿತು ಸಂಡೂರು ಶಾಸಕ ಇ. ತುಕಾರಾಮ್ ನೇತೃತ್ವದ ನಿಯೋಗದ ಜತೆ ಸಭೆ ನಡೆಸಿದರು. ಈ ವೇಳೆ ಸಿಎಂ ಸಿದ್ದರಾಮಯ್ಯ ರೈತರ ನಿಯೋಗಕ್ಕೆ ಭರವಸೆ ನೀಡಿದರು.
ಈ ಉದ್ದೇಶಿತ ಕಾರ್ಖಾನೆಗಳಿಗಾಗಿ ಭೂಸ್ವಾಧೀನ ಪ್ರಕ್ರಿಯೆ ಸಂದರ್ಭದಲ್ಲಿ ದರ ನಿಗದಿ ಮಾಡುವ ವೇಳೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಸಮಿತಿಯು ಅನ್ಯಾಯ ಎಸಗಿದೆ ಎಂಬ ರೈತರ ಆರೋಪದ ಕುರಿತಂತೆ ಪರಿಶೀಲಿಸಿ, ಸಮಸ್ಯೆ ಬಗೆಹರಿಸುವುದಾಗಿ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರು ಸಭೆಯಲ್ಲಿ ಭರವಸೆ ನೀಡಿದರು. ಅರ್ಸೆಲರ್ ಮಿತ್ತಲ್ ಕಾರ್ಖಾನೆಗಾಗಿ ನಡೆಸಿರುವ ಭೂಸ್ವಾಧೀನ ಕುರಿತಂತೆ, ರೈತರಿಗೆ ನೀಡಿರುವ ಪರಿಹಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸುಪ್ರೀಂ ಕೋರ್ಟಿನ ತೀರ್ಪಿನ ಬಗ್ಗೆ ಅಡ್ವೊಕೇಟ್ ಜನರಲ್ ಅವರ ಜೊತೆಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.