ಬೆಳಗಾವಿ:ಪ್ರವಾಹ ಪೀಡಿತ ಉತ್ತರ ಕರ್ನಾಟಕ ಭಾಗದಲ್ಲಿ ರೈತರ ಸ್ಥಿತಿ ಶೋಚನೀಯವಾಗಿದೆ. ನೆರೆಯಿಂದ ರೈತರು ಒಂದೆಡೆ ತಾವು ಬೆಳೆದಿದ್ದ ಬೆಳೆ ಜೊತೆ ಮನೆ ಮಠ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಈ ಮಧ್ಯೆ ಸಾಲ ನೀಡಿದ ಬ್ಯಾಂಕ್ಗಳು, ಫೈನಾನ್ಸ್ಗಳು ಸಾಲ ಮರು ಪಾವತಿಸುವಂತೆ ರೈತರ ಬೆನ್ನ ಹಿಂದೆ ಬಿದ್ದಿವೆ. ಹೀಗಾಗಿ ರೈತರಿಗೆ ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಜಿಲ್ಲೆಯ ರಾಮದುರ್ಗ ತಾಲೂಕಿನ ಹಂಪಿಹೊಳಿ ಗ್ರಾಮದ ನಿಂಗಪ್ಪ ಲಕ್ಕನ್ನವರ ಎಂಬ ರೈತನಿಗೆ ಕೋಲ್ಕತ್ತಾ ಮೂಲದ ಕೋರ್ಟ್ವೊಂದು ಅರೆಸ್ಟ್ ವಾರೆಂಟ್ ಜಾರಿಗೊಳಿಸಿದೆ. ಬೆಳಗಾವಿಯ ಅಂಬೇಡ್ಕರ್ ರಸ್ತೆಯಲ್ಲಿರುವ ಎಲ್ ಆ್ಯಂಡ್ ಟಿ ಫೈನಾನ್ಸ್ ಕೋಲ್ಕತ್ತಾ ಮೂಲದ ಕೋರ್ಟ್ ಮೂಲಕ ರೈತನಿಗೆ ಬಂಧನ ವಾರೆಂಟ್ ಕಳಿಸಿದೆ. ಮಲಪ್ರಭಾ ಡ್ಯಾಂನಿಂದ ಬಿಡಲಾದ ಭಾರಿ ಪ್ರಮಾಣದ ನೀರಿನಿಂದ ಹಂಪಿಹೊಳಿ ಗ್ರಾಮ ಎರಡು ಸಲ ಪ್ರವಾಹಕ್ಕೆ ತುತ್ತಾಗಿತ್ತು. ಪ್ರವಾಹಪೀಡಿತ ಈ ಗ್ರಾಮಕ್ಕೆ ಕೆಲ ದಿನಗಳ ಹಿಂದೆಯಷ್ಟೇ ಸಿಎಂ ಬಿ.ಎಸ್. ಯಡಿಯೂರಪ್ಪ ಭೇಟಿ ನೀಡಿ, ಪ್ರವಾಹ ಸಂತ್ರಸ್ತರಿಗೆ ಸಾಂತ್ವನ ಹೇಳಿದ್ದರು.