ಬೆಳಗಾವಿ : ಕಿಲ್ಲರ್ ಕೊರೊನಾಗೆ ಬಲಿಯಾದ ಕೇಂದ್ರ ಸಚಿವ ಸುರೇಶ್ ಅಂಗಡಿ ಅವರ ಅಂತ್ಯಕ್ರಿಯೆ ದೆಹಲಿಯ ಲಿಂಗಾಯತ ಸ್ಮಶಾನದಲ್ಲಿ ನೆರವೇರಿತು.
ಮಗನ ಅಂತಿಮ ದರ್ಶನವೂ ಸಿಗಲಿಲ್ಲ; ಸುರೇಶ್ ಅಂಗಡಿ ಅಂತ್ಯಕ್ರಿಯೆ ಮೊಬೈಲಿನಲ್ಲೇ ವೀಕ್ಷಿಸಿದ ಕುಟುಂಬಸ್ಥರು
ದೆಹಲಿಯ ಲಿಂಗಾಯತ ಸ್ಮಶಾನದಲ್ಲಿ ನಡೆದ ಸುರೇಶ್ ಅಂಗಡಿ ಅವರ ಅಂತ್ಯಕ್ರಿಯೆಯನ್ನು ತಾಯಿ ಹಾಗೂ ಸಂಬಂಧಿಕರು ಬೆಳಗಾವಿಯ ಮನೆಯಲ್ಲೇ ಕುಳಿತು ವಾಟ್ಸ್ಆ್ಯಪ್ ವಿಡಿಯೋ ಕಾಲ್ ಮೂಲಕ ವೀಕ್ಷಿಸಿದರು. ಅಂತ್ಯಕ್ರಿಯೆ ವೇಳೆ ತಾಯಿ ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.
ವಿಪರ್ಯಾಸವೆಂದರೆ ಹೆತ್ತ ತಾಯಿಗೆ ತನ್ನ ಮಗನ ಅಂತಿಮ ದರ್ಶನ ಮಾಡುವ ಅವಕಾಶವನ್ನು ಕಿಲ್ಲರ್ ಕೊರೊನಾ ಕಿತ್ತುಕೊಂಡಿತು. ಹೀಗಾಗಿ ದೆಹಲಿಯಲ್ಲಿ ನಡೆದ ಸುರೇಶ್ ಅಂಗಡಿ ಅವರ ಅಂತ್ಯಕ್ರಿಯೆಯನ್ನು ಬೆಳಗಾವಿಯ ಮನೆಯಲ್ಲೇ ಕುಳಿತು ವಾಟ್ಸ್ಆ್ಯಪ್ ವಿಡಿಯೋ ಕಾಲ್ ಮೂಲಕ ತಾಯಿ ಸೋಮವ್ವ ವೀಕ್ಷಿಸಿದರು. ತಾಯಿ ಜೊತೆಗೆ ಸುರೇಶ್ ಅಂಗಡಿ ಅವರ ಮಾವ, ಸಹೋದರರು, ಸಂಬಂಧಿಕರು ಮೊಬೈಲ್ ಮೂಲಕವೇ ಅಂತ್ಯಸಂಸ್ಕಾರ ವೀಕ್ಷಿಸಿದರು.
ಸುರೇಶ್ ಅಂಗಡಿ ಅವರ ಅಂತ್ಯಕ್ರಿಯೆ ವೇಳೆ ತಾಯಿ ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಅಂತ್ಯಸಂಸ್ಕಾರಕ್ಕೆ ಕೇವಲ 25 ಜನರಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಹೀಗಾಗಿ ಪತ್ನಿ, ಇಬ್ಬರು ಪುತ್ರಿಯರು, ಅಳಿಯಂದಿರು, ಬೀಗರೂ ಆದ ಜಗದೀಶ ಶೆಟ್ಟರ್ ದಂಪತಿ, ಸುರೇಶ್ ಅಂಗಡಿ ಅವರ ಸಹೋದರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಡಿಸಿಎಂ ಲಕ್ಷ್ಮಣ ಸವದಿ, ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹಾಗೂ ಜಿಲ್ಲೆಯ ಬಿಜೆಪಿ ಕೆಲ ಕಾರ್ಯಕರ್ತರು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು.