ಕರ್ನಾಟಕ

karnataka

ETV Bharat / state

ಚಿಕ್ಕೋಡಿ: ನಿರ್ಲಕ್ಷ್ಯದಿಂದ ಬಾಣಂತಿ ಸಾವು ಸಂಭವಿಸಿದೆ ಎಂದು ಆರೋಪಿಸಿ ಕುಟುಂಬಸ್ಥರ ಪ್ರತಿಭಟನೆ - etv bharat kannada

ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಮೃತಪಟ್ಟಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸಿ ಪ್ರತಿಭಟನೆ ನಡೆಸಿರುವ ಘಟನೆ ಚಿಕ್ಕೋಡಿಯಲ್ಲಿ ನಡೆದಿದೆ.

ಬಾಣಂತಿ ಸಾವು
ಬಾಣಂತಿ ಸಾವು

By

Published : Aug 5, 2023, 10:53 AM IST

Updated : Aug 5, 2023, 12:22 PM IST

ಚಿಕ್ಕೋಡಿ: ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಸಾವು ಸಂಭವಿಸಿದೆ ಎಂದು ಆರೋಪಿಸಿ ಕುಟುಂಬಸ್ಥರು ಸಂಕೇಶ್ವರ ಪೊಲೀಸ್ ಠಾಣೆ ಎದುರು ಬಾಣಂತಿ ಶವ ಇಟ್ಟು ದರಣಿ ನಡೆಸಿದ್ದಾರೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕೋಣಕೇರಿ ಗ್ರಾಮಸ್ಥೆ ಕಿರಣ ಮಹಾದೇವ ಟಿಕ್ಕೆ ಅವರನ್ನು ಹುಕ್ಕೇರಿ ತಾಲೂಕಿನ ನಿಡಸೋಸಿ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ಕಳೆದ ಹನ್ನೆರಡು ದಿನಗಳ ಹಿಂದೆ ಹೆರಿಗೆಗಾಗಿ ದಾಖಲಿಸಲಾಗಿತ್ತು. ನಂತರ ಶಸ್ತ್ರ ಚಿಕಿತ್ಸೆ ಮಾಡುವ ಮುಖಾಂತರ ಹೆರಿಗೆಯನ್ನು ಮಾಡಿಸಲಾಗಿತ್ತು, ಮೃತ ಕಿರಣಿ ಗಂಡು ಮಗುವಿಗೆ ಜನ್ಮ ಕೂಡಾ ನೀಡಿದ್ದರು.

ಆಗಸ್ಟ್ 2ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದ ಕಿರಣಿ ಮಹಾದೇವ ಟಿಕ್ಕೆ, ತವರು ಮನೆ ಮಹಾರಾಷ್ಟ್ರದ ಗಿಜೋಣಿಗೆ ಹೋಗಿದ್ದರು. ಆಗಸ್ಟ್ 4ರಂದು ಆರೋಗ್ಯದಲ್ಲಿ ಏರುಪೇರಾದ ಕಾರಣ ಕುಟುಂಬಸ್ಥರು ಮಹಾರಾಷ್ಟ್ರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿ ಚಿಕಿತ್ಸೆ ಫಲಿಸದೇ ಕಿರಣಿ ಟಿಕ್ಕೆ ಮೃತಪಟ್ಟಿದ್ದಾರೆ.

ಆಂಬ್ಯುಲೆನ್ಸ್​ನಲ್ಲಿ ಶವ ಇಟ್ಟು ಪ್ರತಿಭಟನೆ:ಹೆರಿಗೆ ವೇಳೆ ವೈದ್ಯರು ನಿರ್ಲಕ್ಷ್ಯ ತೋರಿದ್ದರಿಂದ ಹೀಗಾಗಿದೆ ಎಂದು ಖಾಸಗಿ ಆಸ್ಪತ್ರೆ ವೈದ್ಯರು ತಿಳಿಸಿರುವುದಾಗಿ ಕುಟುಂಬಸ್ಥರು ಹೇಳಿದ್ದು, ಹೀಗಾಗಿ ನಿಡಸೋಸಿ ವೈದ್ಯರ ನಿರ್ಲಕ್ಷ್ಯದಿಂದಲೇ ಆಕೆ ಮೃತಪಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲ ಮೃತ ಬಾಣಂತಿ ಸಾವಿಗೆ ಕಾರಣರಾದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸಂಕೇಶ್ವರ ಪೊಲೀಸ್ ಠಾಣೆ ಎದುರು ಆಂಬ್ಯುಲೆನ್ಸ್​ನಲ್ಲಿ ಶವ ಇಟ್ಟು ಶುಕ್ರವಾರ ತಡರಾತ್ರಿ ದರಣಿ ನಡೆಸಿದ್ದಾರೆ. ಹಸುಗೂಸಿನೊಂದಿಗೆ ಬಾಣಂತಿಯ ಶವ ಇಟ್ಟು ಪ್ರತಿಭಟನೆ ನಡೆಸುತ್ತಿದಂತೆ ಸಂಕೇಶ್ವರ ಪೊಲೀಸರು ಕುಟುಂಬಸ್ಥರ ಮನವೊಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಮೇಲೆ ಪ್ರತಿಭಟನೆ ಕೈಬಿಟ್ಟಿದ್ದಾರೆ.

ಪೊಲೀಸರು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.. ಪ್ರತಿಭಟನೆ ಕೈಬಿಟ್ಟಿದ್ದೇವೆ:ಈ ಬಗ್ಗೆ ಮೃತ ಬಾಣಂತಿ ಸಂಬಂಧಿಕರಾದ ಗೀತಾ ಪಾಟೀಲ್ ಎಂಬುವವರು ಮಾಧ್ಯಮದೊಂದಿಗೆ ಮಾತನಾಡಿ, ’’ಸರ್ಕಾರಿ ಆಸ್ಪತ್ರೆಯಲ್ಲಿ ಸಿಜಿರಿನ್​ ಮೂಲಕ ಹೆರಿಗೆಯಾಗಿತ್ತು. ಇದಾದ ಎರಡನೇ ದಿನಕ್ಕೆ ಕಿರಣಿಗೆ ಜ್ವರ ಕಾಣಿಸಿಕೊಂಡಿದೆ. ಬಳಿಕ ರಕ್ತ ಪರೀಕ್ಷೆ ವೇಳೆ ಟೈಫಾಯಿಡ್​ ಆಗಿರುವುದ ಕಂಡು ಬಂದಿದೆ. ಇದಕ್ಕೆ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಹೊಟ್ಟೆಯಲ್ಲಿ ನೋವು ಕಾಣಿಸಿಕೊಂಡಿದೆ. ಸ್ಕ್ಯಾನ್​ ಮಾಡಿದಾಗ ಗಾಯವಾಗಿರುವುದು ತಿಳಿದು ಬಂದಿದ್ದು, ಇದರಿಂದಾಗಿ ಸಾವಾಗಿರುವುದಾಗಿ ವೈದ್ಯರು ಹೇಳಿದ್ದಾರೆ. ಆದರೆ ಈ ಬಗ್ಗೆ ಮೊದಲೇ ಅವರು ಏನೂ ಹೇಳಿಲ್ಲ ಎಂದು ಗೀತಾ ಪಾಟೀಲ್​ ಆರೋಪಿಸಿದ್ದಾರೆ.

ವೈದ್ಯಾಧಿಕಾರಿಗಳು ಹೇಳುವುದಿಷ್ಟು:ಘಟನೆಗೆ ಸಂಬಂಧಿಸಿದಂತೆ ಹುಕ್ಕೇರಿ ತಾಲೂಕಿನ ವೈದ್ಯಾಧಿಕಾರಿ ಡಾಕ್ಟರ್ ಉದಯ್ ಕುಡಚಿ ಈಟಿವಿ ಭಾರತ್ ಜೊತೆ ದೂರವಾಣಿ ಮುಖಾಂತರ ಮಾತನಾಡಿದರು. ’’ಮೃತ ಗರ್ಭಿಣಿ ಕುಟುಂಬಸ್ಥರು ವೈದ್ಯರ ನಿರ್ಲಕ್ಷ್ಯ ಎಂದು ದೂರು ನೀಡಿದ್ದಾರೆ. ನಿಡಸೋಸಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನುರಿತ ವೈದ್ಯರಿದ್ದಾರೆ. ಮೃತ ಮಹಿಳೆ ಜೂ.26ರಂದು ಹೆರಿಗೆಂದು ದಾಖಲಾಗಿದ್ದರು. ಮೊದಲನೇ ಸಲವು ಸಿಜೇರಿಯನ್​ ಮಾಡಿ ಹೆರಿಗೆಯನ್ನು ಮಾಡಿಸಲಾಗಿತ್ತು. ಈ ಸಲವೂ ಅವರಿಗೆ ಶಸ್ತ್ರ ಚಿಕಿತ್ಸೆ ಮೂಲಕವೇ ಹೆರಿಗೆ ಮಾಡಿಸಲಾಗಿತ್ತು, ಕಳೆದ ಏಳು ದಿನಗಳಿಂದ ನಮ್ಮ ಆಸ್ಪತ್ರೆಯಲ್ಲಿದ್ದಾಗ ಅವರ ಆರೋಗ್ಯ ಸ್ಥಿರವಾಗಿತ್ತು. ಅವರ ತವರು ಮನೆಗೆಂದು ಮಹಾರಾಷ್ಟ್ರಕ್ಕೆ ಹೋದಾಗ ಈ ರೀತಿ ಆರೋಗ್ಯದಲ್ಲಿ ಏರುಪೇರಾಗಿ ಅವರು ಮೃತಪಟ್ಟಿದ್ದಾರೆ. ಸದ್ಯ ಶವ ಪರೀಕ್ಷೆ ವರದಿ ಬಂದ ಬಳಿಕವೇ ಘಟನೆಗೆ ಕಾರಣ ಏನು ಎಂಬುದು ಗೊತ್ತಾಗಲಿದೆ. ನಾವು ಕೂಡ ಮಹಾರಾಷ್ಟ್ರದ ಖಾಸಗಿ ಆಸ್ಪತ್ರೆಯಿಂದ ವರದಿಯನ್ನು ಕೇಳಿದ್ದೇವೆ, ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು‘‘ ಎಂದು ವೈದಾಧಿಕಾರಿ ತಿಳಿಸಿದ್ದಾರೆ.

ಈ ಬಗ್ಗೆ ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಮಂಗಳೂರಿನಲ್ಲಿ ಬಾಣಂತಿ ಸಾವು : ಖಾಸಗಿ ಆಸ್ಪತ್ರೆ ಎದರು ಕುಟುಂಬಸ್ಥರಿಂದ ಪ್ರತಿಭಟನೆ

Last Updated : Aug 5, 2023, 12:22 PM IST

ABOUT THE AUTHOR

...view details