ಬೆಳಗಾವಿ: ಬೆಳಗಾವಿಯ ಮೂಡಲಗಿ ಪಟ್ಟಣದ ಹಳ್ಳದಲ್ಲಿ ಏಳು ಭ್ರೂಣಗಳು ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಎ.ವಿ ಕಿವಡಸಣ್ಣವರ ಅವರು ನಿರ್ವಹಣೆ ಮಾಡುತ್ತಿದ್ದ ಕೆಪಿಎಂಇ ಮತ್ತು ಪಿಸಿಪಿಎನ್ಡಿಟಿ ಅಧಿಕಾರ ಮೊಟಕುಗೊಳಿಸಿ ಆದೇಶ ಹೊರಡಿಸಲಾಗಿದೆ.
ಜೂ.24ರಂದು ಬೆಳಗಾವಿ ಜಿಲ್ಲೆಯ ಮೂಡಲಗಿ ಪಟ್ಟಣದ ಹಳ್ಳದಲ್ಲಿ ಏಳು ಮೃತ ಭ್ರೂಣಗಳು ಪ್ಲಾಸ್ಟಿಕ್ ಡಬ್ಬಿಯಲ್ಲಿ ಪತ್ತೆಯಾಗಿದ್ದವು. ಪ್ರಕರಣದ ಸಂಬಂಧ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಆರೋಗ್ಯ ಇಲಾಖೆಗೆ ವರದಿ ಸಲ್ಲಿಕೆ ಮಾಡಿದ್ದರು. ವರದಿಯಲ್ಲಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ವಿ ಕಿವಡಸಣ್ಣವರ ಕಾರ್ಯವೈಖರಿ ಸಮರ್ಪಕವಾಗಿಲ್ಲ. ಕಾಲಕಾಲಕ್ಕೆ ಸ್ಕ್ಯಾನಿಂಗ್ ಸೆಂಟರ್, ಹೆರಿಗೆ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ ಎಂದು ಉಲ್ಲೇಖಿಸಿ ವರದಿ ಸಲ್ಲಿಸಿದ್ದರು.