ಬೆಳಗಾವಿ: ಗಡಿಭಾಗದಲ್ಲಿ ಎಂಇಎಸ್ ನಿರ್ನಾಮ ಆಗುತ್ತಿದ್ದಂತೆ ರಾಜಕೀಯ ಅಸ್ತಿತ್ವಕ್ಕೆ ಹೆಣಗಾಡುತ್ತಿರುವ ಖಾನಾಪುರ ಮಾಜಿ ಶಾಸಕ ಅರವಿಂದ ಪಾಟೀಲ ಬಿಜೆಪಿ ಸೇರಲು ಸಿದ್ಧತೆ ನಡೆಸಿದ್ದಾರೆ. ಈ ಸಂಬಂಧ ಖಾನಾಪುರದಲ್ಲಿ ಅಭಿಮಾನಿಗಳು, ಆಪ್ತರ ಸಭೆ ನಡೆಸಿದ್ದಾರೆ. ತಮ್ಮ ಈ ಎಲ್ಲ ಹಿತೈಷಿಗಳಿಂದ ಅರವಿಂದ ಪಾಟೀಲ ಅಭಿಪ್ರಾಯ ಸಂಗ್ರಹಿಸಿದ್ದಾರೆ.
ಭವಿಷ್ಯದ ರಾಜಕೀಯ ಕುರಿತು ತಮ್ಮ ಬೆಂಬಲಿಗರ ಅಭಿಪ್ರಾಯ ಸಂಗ್ರಹಿಸಿರುವ ಅರವಿಂದ ಪಾಟೀಲಗೆ ಬೆಂಬಲಿಗರು ಬಿಜೆಪಿಗೆ ಸೇರಲು ಸಲಹೆ ನೀಡಿದ್ದಾರೆ. ಸದ್ಯ ಅರವಿಂದ ಪಾಟೀಲ ಮಹಾರಾಷ್ಟ್ರ ಏಕೀಕರಣ ಸಮಿತಿ ಜತೆಗೆ ಗುರುತಿಸಿಕೊಂಡಿದ್ದರು. ಇದೀಗ ಎಂಇಎಸ್ ತೊರೆದು ಬಿಜೆಪಿಗೆ ಸೇರಲು ಅರವಿಂದ ಪಾಟೀಲ್ ತಯಾರಿ ನಡೆಸಿದ್ದಾರೆ.
ಬೆಂಬಲಿಗರ ಅಭಿಪ್ರಾಯ ಸಂಗ್ರಹಿಸಿದ ಅರವಿಂದ ಪಾಟೀಲ ಎಂಇಎಸ್‌ನಿಂದ ಗೆದ್ದು ಒಮ್ಮೆ ಶಾಸಕನಾಗಿದ್ದ ಅರವಿಂದ ಪಾಟೀಲ ಹಾಲಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿದ್ದಾರೆ. ಅಲ್ಲದೇ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಆಪ್ತ ವಲಯದಲ್ಲಿ ಇವರು ಗುರುತಿಸಿಕೊಂಡಿದ್ದಾರೆ. ಅರವಿಂದ ಪಾಟೀಲ್ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಈ ಹಿಂದೆ ಲಕ್ಷ್ಮಣ ಸವದಿ ಅವರೇ ಮಾಧ್ಯಮಗಳಿಗೆ ತಿಳಿಸಿದ್ದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಡಾ. ಅಂಜಲಿ ನಿಂಬಾಳ್ಕರ್ ವಿರುದ್ಧ ವಿಠ್ಠಲ್ ಪರಾಭವಗೊಂಡಿದ್ದರು. ಖಾನಾಪುರದಲ್ಲಿ ಪ್ರಬಲ ನಾಯಕತ್ವದ ಕೊರತೆಯನ್ನು ಬಿಜೆಪಿ ಎದುರಿಸುತ್ತಿದೆ. ಹೀಗಾಗಿ, ಅರವಿಂದ ಪಾಟೀಲ್‌ರನ್ನು ಪಕ್ಷಕ್ಕೆ ಕರೆತಂದು ಆ ಕೊರತೆ ನೀಗಿಸಲು ಬಿಜೆಪಿ ಪ್ಲ್ಯಾನ್ ಮಾಡಿದೆ. ಮುಂದಿನ ವಾರದೊಳಗೆ ಅರವಿಂದ ಪಾಟೀಲ್ ಬಿಜೆಪಿ ಸೇರ್ಪಡೆ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.