ಬೆಂಗಳೂರು/ಬೆಳಗಾವಿ: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಕರೆದ ಸಭೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೋಗಬಾರದಿತ್ತು ಎಂದು ವಿಪಕ್ಷದ ನಾಯಕ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.
ವಿಧಾನಸಭೆಯಲ್ಲಿ ಮಂಗಳವಾರ ಗಡಿ ವಿವಾದದ ಕುರಿತಾಗಿ ನಡೆದ ಚರ್ಚೆಯಲ್ಲಿ ಮಾತನಾಡಿದ ಅವರು, ಗಡಿ ವಿಚಾರವಾಗಿ ಅಮಿತ್ ಶಾ ಕರೆದ ಸಭೆಗೆ ಹೋಗಬಾರದಿತ್ತು. ಗಡಿ ವಿವಾದ ಇದೆ ಎಂದು ತೋರಿಸುವುದು ಮಹಾರಾಷ್ಟ್ರದ ಉದ್ದೇಶವಾಗಿದೆ. ಕರ್ನಾಟಕ, ಮಹಾರಾಷ್ಟ್ರ ಮತ್ತು ಕೇಂದ್ರದಲ್ಲಿ ತ್ರಿಬಲ್ ಇಂಜಿನ್ ಸರ್ಕಾರ ಇದೆ. ಗಡಿ ವಿವಾದ ನಿವಾರಣೆ ಮಾಡಬೇಕಾಗಿರುವುದು ಅವರ ಜವಾಬ್ದಾರಿ ಅಲ್ಲವೇ?. ಕೇಂದ್ರ ಸರ್ಕಾರ ಕೂಡಲೇ ಮಧ್ಯಪ್ರವೇಶ ಮಾಡಿ ಬಾಯಿ ಮುಚ್ಚಿಕೊಂಡು ಇರಿ, ಗೂಂಡಾಗಿರಿ, ಪುಂಡಾಟಿಕೆ ಮಾಡುವುದು ಬಿಡಿ ಎಂದು ಮಹಾರಾಷ್ಟ್ರಕ್ಕೆ ಎಚ್ಚರಿಕೆ ಕೊಡಬೇಕಿತ್ತು. ಸಮಿತಿ ರಚನೆ ಮಾಡಿದ್ದಾರೆ, ಅದಕ್ಕೆ ಏಕೆ ಒಪ್ಪಬೇಕೆಂದು ಎಂದು ಪ್ರಶ್ನಿಸಿದರು.
ವಿವಾದವನ್ನು ಜೀವಂತವಾಗಿ ಇಟ್ಟು ರಾಜಕೀಯವಾಗಿ ಬಳಸುವುದು ಮಹಾರಾಷ್ಟ್ರದ ಉದ್ದೇಶ. ವಿಚಾರ ನ್ಯಾಯಾಲಯದಲ್ಲಿದೆ. ಅದು ಇತ್ಯರ್ಥ ಆಗುವವರೆಗೂ ಮಾತುಕತೆ ಇಲ್ಲ ಎಂದು ರಾಜ್ಯ ಸರ್ಕಾರ ಹೇಳಬೇಕಿತ್ತು. ಮಹಾರಾಷ್ಟ್ರದ ಸಿಎಂ ಏಕನಾಥ್ ಶಿಂಧೆ ಮೂರು ಜನ ಮಂತ್ರಿಗಳನ್ನು ಬೆಳಗಾವಿಗೆ ಕಳಿಸಲು ಮುಂದಾಗಿದ್ದರು. ಆದರೆ, ಅವರನ್ನು ಬರದಂತೆ ಮಾಡಿರುವುದು ಒಳ್ಳೆಯ ಕ್ರಮ ಎಂದರು.
ರಾಜಕೀಯ ಕಾರಣಕ್ಕಾಗಿ ಗಡಿ ವಿಚಾರ ಜೀವಂತ: ಮಹಾರಾಷ್ಟ್ರದ ಒತ್ತಾಯದ ಮೇರೆಗೆ ಮಹಾಜನ್ ಆಯೋಗ ರಚನೆ ಆಗಿತ್ತು. 1967ರ ಆಗಸ್ಟ್ನಲ್ಲಿ ಮಹಾಜನ್ ಆಯೋಗ ವರದಿ ನೀಡಿತು. ವರದಿ ನೀಡಿದ ಬಳಿಕವೂ ಮಹಾರಾಷ್ಟ್ರ ಸರ್ಕಾರ ತಿರಸ್ಕಾರ ಮಾಡಿತ್ತು. ಆದರೆ, ಈ ವರದಿಯನ್ನು ಕರ್ನಾಟಕ ಸ್ವಾಗತ ಮಾಡಿತ್ತು. ಮಹಾರಾಷ್ಟ್ರದವರು ರಾಜಕೀಯ ಕಾರಣಕ್ಕಾಗಿ ಗಡಿ ವಿಚಾರವನ್ನು ಜೀವಂತವಾಗಿಟ್ಟಿದ್ದಾರೆ. ಯಾವುದೇ ಗಡಿ ವಿವಾದ ಇಲ್ಲ. ಆದರೆ ರಾಜಕೀಯ ಕಾರಣಕ್ಕಾಗಿ ಮಹರಾಷ್ಟ್ರದವರು ಕೆದಕುತ್ತಿರುತ್ತಾರೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
1881ರ ಸಮೀಕ್ಷೆ ಪ್ರಕಾರ ಬೆಳಗಾವಿಯಲ್ಲಿ ಶೇ.64.39ರಷ್ಟು ಕನ್ನಡ ಮಾತನಾಡುವ ಜನರಿದ್ದಾರೆ. ಶೇ.26.04ರಷ್ಟ್ರು ಮಾತ್ರ ಮರಾಠಿ ಮಾತಾನಾಡುವ ಜನರಿದ್ದಾರೆ. ಮಹಾಜನ್ ಆಯೋಗ ಬೆಳಗಾವಿ ಸಂಪೂರ್ಣವಾಗಿ ಕರ್ನಾಟಕಕ್ಕೆ ಸೇರಬೇಕೆಂದು ಹೇಳಿದೆ. ಆದರೂ, ಕಾಲು ಕೆದಕಿ ಮಹಾರಾಷ್ಟ್ರದವರು ಜಗಳಕ್ಕೆ ಬರ್ತಿದ್ದಾರೆ. 2004 ರಲ್ಲಿ ನಾವು ಸುಪ್ರೀಂಕೋರ್ಟ್ಗೆ 1956ರ ಕಾಯ್ದೆ ಪ್ರಶ್ನಿಸಿ ಹೋಗಿದ್ದೆವು. ಹೀಗಿದ್ದರೂ ಮಹಾರಾಷ್ಟ್ರದವರು ಜಗಳ ತೆಗೆಯುತ್ತಿದ್ದಾರೆ ಎಂದರು.