ಬೆಳಗಾವಿ:ಮಂಚದ ಮೇಲೆರಡು ಮಕ್ಕಳ ಶವ, ಕೆಳಗೆ ಮೂವರ ಶವ.. ಮನೆ ಎದುರು ಜಮಾಯಿಸಿರುವ ನೂರಾರು ಗ್ರಾಮಸ್ಥರು, ಸ್ಥಳಕ್ಕೆ ಬಂದ ಕುಟುಂಬಸ್ಥರ ಮುಗಿಲು ಮುಟ್ಟಿದ ಆಕ್ರಂದನ. ಈ ಎಲ್ಲ ಕರುಣಾಜನಕ ದೃಶ್ಯಗಳು ಕಂಡು ಬಂದಿದ್ದು, ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೋರಗಲ್ ಗ್ರಾಮದಲ್ಲಿ. ಹೌದು ಇಲ್ಲಿ ಇಡೀ ರಾಜ್ಯವೇ ಬೆಚ್ಚಿ ಬೀಳುವಂತ ದೊಡ್ಡ ದುರಂತವೊಂದು ನಡೆದಿದೆ.
ನಾಲ್ವರು ಮಕ್ಕಳಿಗೆ ವಿಷವಿಕ್ಕಿ ನಿವೃತ್ತ ಯೋಧ ಆತ್ಮಹತ್ಯೆ ಈ ಪೋಟೋದಲ್ಲಿ ಕಾಣುವ ವ್ಯಕ್ತಿಯ ಹೆಸರು ಗೋಪಾಲ ಹಾದಿಮನಿ. ಇವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಮೂರು ವರ್ಷಗಳ ಹಿಂದೆ ನಿವೃತ್ತಿಯಾಗಿದ್ದರು. ಹುಟ್ಟೂರಿಗೆ ಆಗಮಿಸಿ ಕೃಷಿ ಮಾಡಲು ಆರಂಭಿಸಿದ್ದರು.
ಪತ್ನಿ ಮೂವರು ಹೆಣ್ಣು ಮಕ್ಕಳು ಒಬ್ಬ ಗಂಡು ಮಗನೊಂದಿಗೆ ಸುಖ ಸಂಸಾರ ನಡೆಸುತ್ತಿದ್ದರು. ಗೋಪಾಲ ಅವರ ಹಿರಿಯ ಮಗಳಾದ ಸೌಮ್ಯ ಮತ್ತು ಶ್ವೇತಾ ಸಂಕೇಶ್ವರ ಪಟ್ಟಣದಲ್ಲಿ ಕಾಲೇಜಿಗೆ ಹೋಗುತ್ತಿದ್ದರು. ಇತ್ತ ಚಿಕ್ಕವರಾದ ಸಾಕ್ಷಿ, ಸೃಜನ್ ಅಕ್ಟೋಬರ್ 25ರಿಂದ ಶಾಲೆಗೆ ಹೋಗುವ ತಯಾರಿ ನಡೆಸಿದ್ದರು.
ಗೋಪಾಲಗೆ ಪತ್ನಿ ಜಯಶ್ರೀ ಮೇಲೆ ಅತಿಯಾದ ಪ್ರೀತಿ. ಆದರೆ, ಜುಲೈ 6ರಂದು ಜಯಶ್ರೀ ಕೊರೊನಾ ಸೋಂಕಿಗೆ ಬಲಿಯಾಗಿದ್ದರು. ಆಕೆ, ಮೃತಪಟ್ಟ ಬಳಿಕ ಹೆಂಡತಿಯ ಗುಂಗಿನಲ್ಲಿಯೇ ಇದ್ದ ಗೋಪಾಲ, ಆಗಾಗ ಹೆಂಡತಿ ಅಗಲಿಕೆ ನೋವಿನ ಬಗ್ಗೆ ನೋವು ತೋಡಿಕೊಳ್ಳುತ್ತಿದ್ದರು. ಮಕ್ಕಳು ಸಹ ತಾಯಿಯ ಅಗಲುವಿಕೆಯ ನೋವಿನಿಂದ ಕುಗ್ಗಿ ಹೋಗಿದ್ದರು.
ಶುಕ್ರವಾರ ರಾತ್ರಿ ಊಟ ಮುಗಿಸಿ ಸಂಬಂಧಿಕರ ಜತೆಗೆ ದೂರವಾಣಿಯಲ್ಲಿ ಮಾತನಾಡಿದ್ದ. ಬಳಿಕ ಮಲಗಲು ಹೋದಾಗ ಮಕ್ಕಳಿಗೆ ನೀರಿನಲ್ಲಿ ವಿಷ ಬೆರೆಸಿ ಕುಡಿಸಿ ನಂತರ ತಾನೂ ಕುಡಿದು ಆತ್ಮಹತ್ಯೆಗೆ ಶರಣಾಗಿದ್ದ.
ಇತ್ತ ಬೆಳಗಾಗಿ ಎಷ್ಟೊತ್ತಾದರೂ ಬಾಗಿಲು ತೆರೆದಿಲ್ಲ. ಇದನ್ನು ಗಮನಿಸಿದ ಸ್ಥಳೀಯರು ಮೊದಲು ಕೂಗಿ ನೋಡಿದ್ದಾರೆ. ಮನೆಯ ಒಳಗಿನಿಂದ ಯಾವುದೇ ಪ್ರತಿಕ್ರಿಯೇ ಬಾರದೇ ಇದ್ದಾಗ, ಬಾಗಿಲು ಮುರಿದು ಒಳ ಹೋಗಿ ನೋಡಿದ್ದಾರೆ. ಆಗ ಎಲ್ಲರೂ ಮೃತಪಟ್ಟಿರುವುದು ಗೊತ್ತಾಗಿದೆ. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.
ಅಮ್ಮ ತೀರಿ ಹೋಗಿ ತಬ್ಬಲಿಯಾಗಿದ್ದ ಮಕ್ಕಳಿಗೆ ಅಪ್ಪನೇ ಆಸರೆಯಾಗಿ ನಿಲ್ಲಬೇಕಿತ್ತು. ಆದರೆ, ಗೋಪಾಲ ತನ್ನ ಪತ್ನಿಯ ನೆನಪಿನಲ್ಲಿ ಮಕ್ಕಳಿಗೂ ಸಹ ವಿಷ ಉಣಿಸಿದ್ದು ದುರ್ದೈವ. ಸುಂದರ ಸಂಸಾರದ ದುರಂತ ಅಂತ್ಯಕ್ಕೆ ಇಡೀ ಗ್ರಾಮವೇ ಮಮ್ಮಲ ಮರಗುತ್ತಿದೆ.