ಬೆಳಗಾವಿ: ನಗರದ ಮರಾಠಾ ಲಘು ಪದಾತಿ ದಳದಲ್ಲಿ (ಎಂಎಲ್ಐಆರ್ಸಿ) ತರಬೇತಿ ಪೂರ್ಣಗೊಳಿಸಿದ 'ಅಗ್ನಿವೀರ' ಮೊದಲ ತಂಡದ ನಿರ್ಗಮನ ಪಥಸಂಚಲನ ಶನಿವಾರ ಸುರಿಯುತ್ತಿರುವ ಮಳೆಯ ನಡುವೆಯೇ ಆಕರ್ಷಕವಾಗಿ ನೆರವೇರಿತು. 31 ವಾರ ತರಬೇತಿ ಪಡೆದ 111 ಪ್ರಶಿಕ್ಷಣಾರ್ಥಿಗಳು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಲು ಅಣಿಯಾದರು. ಮಳೆ ನಡುವೆಯೂ ಶಿಬಿರಾರ್ಥಿಗಳ ಆಕರ್ಷಕ ಪಥಸಂಚಲನ ಎಲ್ಲರ ಗಮನ ಸೆಳೆಯಿತು.
ತರಬೇತಿ ವೇಳೆ ತಾವು ಕಲಿತ ವಿವಿಧ ಕೌಶಲಗಳು ಹಾಗೂ ಸಾಹಸ ಕಲೆಗಳನ್ನು ಪ್ರದರ್ಶಿಸಿ ತಮ್ಮ ಸಾಮರ್ಥ್ಯವನ್ನು ಪ್ರಶಿಕ್ಷಣಾರ್ಥಿಗಳು ಸಾಬೀತು ಪಡಿಸಿದರು. ಪ್ರತಿಭಾವಂತ ಅಗ್ನಿವೀರರಿಗೆ ಇದೇ ವೇಳೆ ಪ್ರಶಸ್ತಿ ಫಲಕಗಳನ್ನು ನೀಡಿ ಗೌರವಿಸಲಾಯಿತು. ಅಕ್ಷಯ ಧೀರೆ ಅವರಿಗೆ ನಾಯ್ಕ ಯಶವಂತ್ ಗಾಡಗೆ ವಿಕ್ಟೋರಿಯಾ ಕ್ರಾಸ್ ಮೆಡಲ್ ಪ್ರದಾನ ಮಾಡಲಾಯಿತು.
ಪ್ರಶಿಕ್ಷಣಾರ್ಥಿಗಳಿಂದ ಗೌರವವಂದನೆ ಸ್ವೀಕರಿಸಿ ಮಾತನಾಡಿದ ಜ್ಯೂನಿಯರ್ ಲೀಡರ್ಸ್ ವಿಂಗ್ ಕಮಾಂಡರ್ ಮೇಜರ್ ಜನರಲ್ ಆರ್. ಎಸ್. ಗುರಯ್ಯ ಅವರು, ಭಾರತೀಯ ಸೈನ್ಯದ ಅತ್ಯಂತ ಹಳೆಯ ಪದಾತಿ ದಳ ಇದಾಗಿದೆ. ಇದಕ್ಕೆ ವೈಭವದ ಇತಿಹಾಸವಿದೆ. ಶಿಸ್ತು ಮತ್ತು ದೈಹಿಕ ಸಾಮರ್ಥ್ಯ ಸೈನಿಕರ ಬದುಕಿನಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಈ ತರಬೇತಿಯು ಶಿಬಿರಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಿದೆ. ದೇಶಕ್ಕಾಗಿ ಸಮರ್ಪಿತ ಸೇವೆಯೇ ನಮ್ಮ ಜೀವನವಾಗಬೇಕು ಎಂದು ಕರೆ ನೀಡಿದರು.