ಚಿಕ್ಕೋಡಿ : ಚಿಕ್ಕೋಡಿ ಪೊಲೀಸ್ ಠಾಣೆಯಿಂದ ಪರಾರಿಯಾಗಿದ್ದ ಕೈದಿಯನ್ನು ಸೆರೆ ಹಿಡಿಯುವಲ್ಲಿ ಚಿಕ್ಕೋಡಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೊಪ್ಪಳ ಸೆಂಟ್ರಲ್ ಜೈಲಿನಿಂದ ಜಶ್ವಂತ್ ಸಿಂಗ್ ಎಂಬ ಆರೋಪಿಯನ್ನು ಬುಧವಾರ ಮಧ್ಯರಾತ್ರಿ ಚಿಕ್ಕೋಡಿ ಪೊಲೀಸರು ಕರೆತಂದಿದ್ದರು. ಇನ್ನೇನು ಬೆಳಗ್ಗೆ ನ್ಯಾಯಾಧೀಶರ ಮುಂದೆ ಪೊಲೀಸರು ಹಾಜರುಪಡಿಸುವ ಮುಂಚೆ ಬಾತ್ರೂಮ್ಗೆ ಹೋಗಿ ಬರ್ತೀನಿ ಅಂತಾ ಹೇಳಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಜಶ್ವಂತ್ ಸಿಂಗ್ ಠಾಣೆಯಿಂದ ಪರಾರಿಯಾಗಿದ್ದ.
ಆರೋಪಿ ಜಶ್ವಂತ್ ಸಿಂಗ್ ತಂದೆ, ತಾಯಿ ಮಹಾರಾಷ್ಟ್ರದ ಪುಣೆಯಲ್ಲಿ ಹಾಗೂ ಹೆಂಡತಿ ಮಧ್ಯಪ್ರದೇಶದಲ್ಲಿ ಇರುವ ಬಗ್ಗೆ ಮಾಹಿತಿ ಪಡೆದ ಚಿಕ್ಕೋಡಿ ಪೊಲೀಸರು ಹುಡುಕಾಟಕ್ಕೆ ಎರಡು ತಂಡಗಳನ್ನ ರಚಿಸಿದ್ದರು. ಒಂದು ತಂಡ ಮಧ್ಯ ಪ್ರದೇಶದ ಕಡೆ ಹಾಗೂ ಮತ್ತೊಂದು ತಂಡ ಮಹಾರಾಷ್ಟ್ರದ ಪುಣೆಗೆ ತೆರಳಿ ಹುಡುಕಾಟ ಆರಂಭಿಸಿತ್ತು.
ನಿನ್ನೆ ಮಹಾರಾಷ್ಟ್ರ ಪೊಲೀಸರ ಸಹಾಯದಿಂದ ಪುಣೆಯಲ್ಲಿ ಆರೋಪಿ ಜಶ್ವಂತ್ ಸಿಂಗ್ನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಘಟನೆಯಿಂದ ತೀವ್ರ ಮುಖಭಂಗಕ್ಕೆ ಒಳಗಾಗಿದ್ದ ಚಿಕ್ಕೋಡಿ ಪೊಲೀಸರು ಆರೋಪಿ ಜಶ್ವಂತ್ ಸಿಂಗ್ ಬಂಧನದಿಂದ ನಿಟ್ಟುಸಿರು ಬಿಟ್ಟಿದ್ದಾರೆ. ಇನ್ನು, ಮಧ್ಯಪ್ರದೇಶ ಮೂಲದ ಜಶ್ವಂತ್ ಸಿಂಗ್ ಮೇಲೆ ಹಲವು ಪೊಲೀಸ್ ಠಾಣೆಗಳಲ್ಲಿ ಕಳ್ಳತನ, ಡಕಾಯತಿ ಸೇರಿದಂತೆ ವಿವಿಧ ಕೇಸುಗಳು ದಾಖಲಾಗಿವೆ.
ಓದಿ:ಚಿಕ್ಕೋಡಿ: ವಿಚಾರಣಾಧೀನ ಕೈದಿ ಪೊಲೀಸ್ ಠಾಣೆಯಿಂದಲೇ ಎಸ್ಕೇಪ್