ಬೆಳಗಾವಿ: ಮುಗ್ದ ಜನರನ್ನು ರಾಜಕೀಯ ಬಳಸಿಕೊಳ್ಳುವ ಯತ್ನ ಮಾಡಲಾಗುತ್ತಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಆರೋಪಿಸಿದ್ದಾರೆ. ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಈರಣ್ಣ ಕಡಾಡಿ, ನಿನ್ನೆ ತಮ್ಮ ಕಾರಿಗೆ ಮುತ್ತಿಗೆ ಹಾಕಿದ ವಿಚಾರವಾಗಿ ಮಾತನಾಡಿದ ಅವರು, ನಮ್ಮೂರಿಗೆ ಹೋಗುವ ದಾರಿಯಲ್ಲಿ ಕೆಲವು ಜನರು ಸತೀಶ ಬೆಂಬಲಿಗರು ಎಂದು ಹೇಳಿಕೊಂಡು ಪ್ರತಿಭಟನೆ ಮಾಡಿದರು.
ಈ ವೇಳೆ ನನ್ನ ಕಾರಿಗೆ ದಾಳಿ ಮಾಡುವ ಯತ್ನವನ್ನೂ ಮಾಡಿದರು. ಈ ಘಟನೆಗಳನ್ನು ನೋಡಿ ನಮ್ಮೆಲ್ಲ ನಾಯಕರು ನನಗೆ ಕರೆ ಮಾಡಿದರು. ನಾನೇ ಬೆಳಗಾವಿಗೆ ಬಂದು ಈ ವಿಷಯದ ಬಗ್ಗೆ ತಿಳಿಸಿದ್ದೇನೆ ಎಂದರು.
ಇನ್ನು ಕಾರಿಗೆ ಮುತ್ತಿಗೆ ಹಾಕಿದವರು ಮುಗ್ಧ ಜನರಿದ್ದಾರೆ. ಅವರಿಗೆ ಯಾರೋ ತಲೆತುಂಬಿ ರಾಜಕೀಯವಾಗಿ ಬಳಸಿಕೊಳ್ಳಲು ಯತ್ನ ಮಾಡುತ್ತಿದ್ದಾರೆ ಎಂದು ಅನಿಸುತ್ತಿದೆ. ಹೀಗಾಗಿ ಇದನ್ನು ಹೆಚ್ಚು ಬೆಳೆಸುವ ಅವಶ್ಯಕತೆ ಇಲ್ಲ. ಆ ಜನರು ಯಾರು ಏನು ಎಂದು ನನಗೆ ಗೊತ್ತಿದೆ. ಕೆಲವರು ನನ್ನ ನೋಡಿದ ತಕ್ಷಣ ಬದಿಗೆ ಹೋಗಿದ್ದಾರೆ. ಇದನ್ನೆಲ್ಲ ನೋಡಿದಾಗ ಅವರಿಗೆ ಯಾರೋ ತಲೆ ತುಂಬುವ ಕೆಲಸ ಮಾಡಿದ್ದಾರೆ ಎಂದು ಹೇಳಿದರು.