ಬೆಳಗಾವಿ:ಒಂದೆಡೆ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕರ್ನಾಟಕ ರಾಜ್ಯೋತ್ಸವಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ. ಮತ್ತೊಂದೆಡೆ ಎಂಇಎಸ್ ಮುಖಂಡರು ಕರಾಳ ದಿನ ಆಚರಿಸಲು ಗುಪ್ತ ಸಭೆಗಳನ್ನು ನಡೆಸುತ್ತಿದ್ದಾರೆ. ಇದಕ್ಕೆಲ್ಲ ತಿರುಗೇಟು ಕೊಟ್ಟಿರುವ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ರಾಜ್ಯೋತ್ಸವ ದಿನದಂದು ಮಹಾರಾಷ್ಟ್ರ ಸರ್ಕಾರದ ಮೂವರು ಸಚಿವರು ಹಾಗೂ ಸಂಸದರೊಬ್ಬರಿಗೆ ಬೆಳಗಾವಿ ಮಹಾನಗರ ಮತ್ತು ಜಿಲ್ಲೆ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಹೌದು.., ನವೆಂಬರ್ 1ರಂದು ಕನ್ನಡಿಗರ ಪಾಲಿನ ಹೆಮ್ಮೆ ಮತ್ತು ಗೌರವದ ದಿನ. ಆ ದಿನ ಕನ್ನಡಮ್ಮನ ಮಕ್ಕಳ ಸಂಭ್ರಮಕ್ಕೆ ಪಾರವೇ ಇರುವುದಿಲ್ಲ. ಅದರಲ್ಲೂ ಬೆಳಗಾವಿಯಲ್ಲಿ ರಾಜ್ಯೋತ್ಸವದ ಸಂಭ್ರಮ ಇಮ್ಮಡಿ ಆಗಿರುತ್ತದೆ. ಇದೇ ವೇಳೆ, ಎಂಇಎಸ್ ಕರಾಳ ದಿನ ಆಚರಿಸುವ ಮೂಲಕ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತರುವ ಕೆಲಸವನ್ನು ಅನೇಕ ವರ್ಷಗಳಿಂದ ಮಾಡಿಕೊಂಡು ಬಂದಿದೆ. ಕಳೆದ ವರ್ಷದಂತೆ ಈ ಬಾರಿಯೂ ಇದಕ್ಕೆ ಬ್ರೇಕ್ ಹಾಕಿರುವ ಜಿಲ್ಲಾಧಿಕಾರಿ ನಿತೇಶ ಪಾಟೀಲ, ಕರಾಳ ದಿನಕ್ಕೆ ಯಾವುದೇ ಕಾರಣಕ್ಕೂ ಅನುಮತಿ ನೀಡಲ್ಲ ಎನ್ನುವ ಮೂಲಕ ಕನ್ನಡತನ ಮೆರೆದಿದ್ದರು.
ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ ಜಿಲ್ಲಾಧಿಕಾರಿಗಳು, ಟಿಳಕವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಚಾರ ಕೈಗೊಂಡ ಬಳಿಕ ಮರಾಠಾ ಮಂದಿರದಲ್ಲಿ ಎಂಇಎಸ್ ಸಭೆ ನಡೆಸುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಆ ಸಭೆಗೆ ಮಹಾರಾಷ್ಟ್ರ ಸಚಿವರಾದ ಶಂಭುರಾಜೆ ದೇಸಾಯಿ, ಚಂದ್ರಕಾಂತ ಪಾಟೀಲ, ದೀಪಕ ಕೇಸರಕರ್ ಹಾಗೂ ಸಂಸದ ಧೈರ್ಯಶೀಲ ಮಾನೆ ಅವರು ಭಾಗವಹಿಸಿ ಪ್ರಚೋದನಕಾರಿ ಭಾಷಣ ಮಾಡಲಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ. ಹೀಗಾಗಿ ಈ ನಾಲ್ವರಿಗೆ ಬೆಳಗಾವಿ ನಗರ ಮತ್ತು ಜಿಲ್ಲಾ ಪ್ರವೇಶ ನಿರ್ಬಂಧಿಸಿ ಖಡಕ್ ಆದೇಶ ಹೊರಡಿಸಿದ್ದಾರೆ.