ಬೆಳಗಾವಿ : ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (AICTE) ಮಾರ್ಗಸೂಚಿಯನ್ವಯ 2022-23ರಿಂದ ವಿಟಿಯು ವ್ಯಾಪ್ತಿಯ ಕೆಲ ಕಾಲೇಜುಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಇಂಜಿನಿಯರಿಂಗ್ ಶಿಕ್ಷಣ ನೀಡಲಾಗುವುದು ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕರಿಸಿದ್ದಪ್ಪ ಮಾಹಿತಿ ನೀಡಿದ್ದಾರೆ.
ನಗರದಲ್ಲಿ ನಡೆದ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಆಯಾ ರಾಜ್ಯಗಳ ಮಾತೃಭಾಷೆಯಲ್ಲಿ ಶಿಕ್ಷಣ ಕೊಡಬೇಕೆಂಬುದು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿದೆ, ಇದು ಉತ್ತಮ ಬೆಳವಣಿಗೆ ಎಂದರು.
ಶಿಕ್ಷಣ ಸಚಿವರ ಘೋಷಣೆಯಂತೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (AICTE) ಮಾರ್ಗಸೂಚಿಯನ್ವಯ 2022-23ರಿಂದ ವಿಟಿಯು ವ್ಯಾಪ್ತಿಯ ಕೆಲ ಕಾಲೇಜುಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಇಂಜಿನಿಯರಿಂಗ್ ಶಿಕ್ಷಣ ನೀಡಲು ಪ್ರಾರಂಭಿಸಿದ್ದೇವೆ ಎಂದು ತಿಳಿಸಿದರು.
ವಿಟಿಯು ಕುಲಪತಿ ಪ್ರೊ.ಕರಿಸಿದ್ದಪ್ಪ ಈಗಾಗಲೇ 25ಕ್ಕೂ ಹೆಚ್ಚು ಕಾಲೇಜುಗಳು ಕನ್ನಡದಲ್ಲಿ ಇಂಜಿನಿಯರಿಂಗ್ ಕಲಿಸುವುದಕ್ಕೆ ಮುಂದೆ ಬಂದಿವೆ. ರಾಜ್ಯದಲ್ಲಿರುವ 290 ಕಾಲೇಜುಗಳ ಪೈಕಿ 75 ಕಾಲೇಜುಗಳಲ್ಲಿ ಅಂದಾಜು 3,000 ಹೆಚ್ಚಿನ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆಯಲ್ಲಿ ಇಂಜಿನಿಯರಿಂಗ್ ಕಲಿಕೆಗೆ ಅವಕಾಶ ನೀಡಲಾಗುವುದು. ಈಗಾಗಲೇ ಅದಕ್ಕೆ ಸಂಬಂಧಿಸಿದಂತೆ ಇಂಗ್ಲಿಷ್ ಪುಸ್ತಕಗಳನ್ನು ಭಾಷಾಂತರ ಮಾಡುವ ಕಾರ್ಯ ನಡೆದಿದೆ ಎಂದು ಮಾಹಿತಿ ನೀಡಿದರು.
ಓದಿ : ಮಹದಾಯಿಗಾಗಿ ಮತ್ತೆ ಬೀದಿಗಿಳಿಯಲ್ಲಿದ್ದಾರೆ ಉತ್ತರ ಕರ್ನಾಟಕ ಭಾಗದ ಜನತೆ
ಇಂಜಿನಿಯರಿಂಗ್ ಶಿಕ್ಷಣದಲ್ಲಿ ಕೆಲವು ಇಂಗ್ಲಿಷ್ ಪದಗಳಿಗೆ ಕನ್ನಡದಲ್ಲಿ ಪರ್ಯಾಯ ಪದಗಳು ಸಿಗುವುದು ಕಠಿಣ. ಅಂತಹ ಇಂಗ್ಲಿಷ್ ಪದಗಳನ್ನು ಇಂಗ್ಲಿಷ್‌ನಲ್ಲೇ ಹೇಳಿಕೊಡಲಾಗುವುದು ಎಂದು ವಿಟಿಯು ಕುಲಪತಿ ಪ್ರೊ. ಕರಿಸಿದ್ಧಪ್ಪ ಹೇಳಿದರು.
ಕನ್ನಡ ಮಾಧ್ಯಮದಲ್ಲಿ ಇಂಜಿನಿಯರಿಂಗ್ ಕಲಿತರೆ, ಮುಂದೆ ಉದ್ಯೋಗ ಪಡೆಯುದು ಕಷ್ಟ ಸಾಧ್ಯ ಎನ್ನುವ ಮಾತಿದೆ. ಆದರೆ, ಪ್ರಸ್ತುತ ಕಾಲ ಬದಲಾಗಿದೆ. ಕನ್ನಡದಲ್ಲಿ ಕಲಿತ ಎಷ್ಟೋ ವಿದ್ಯಾರ್ಥಿಗಳು ಇಂಗ್ಲಿಷ್ ಭಾಷೆಯಲ್ಲಿ ಪ್ರೌಢಿಮೆ ಹೊಂದಿದ್ದಾರೆ. ಹೀಗಾಗಿ, ಯಾವ ಮಾಧ್ಯಮದಲ್ಲಿ ಶಿಕ್ಷಣ ಪಡೆಯುತ್ತೇವೆ ಎನ್ನುವುದು ಮುಖ್ಯವಾಗುವುದಿಲ್ಲ ಎಂದರು.
ಕನ್ನಡ ಕಲಿತವರಿಗೆ ಸರ್ಕಾರಿ ಕಚೇರಿಗಳಲ್ಲಿ ಆದ್ಯತೆ ನೀಡಿ:ಕನ್ನಡ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಸರ್ಕಾರಿ ಕಚೇರಿಗಳಲ್ಲಿ ಆದ್ಯತೆ ನೀಡುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕು. ಅದಕ್ಕಾಗಿ ಒಂದು ನಿಯಮವನ್ನು ರೂಪಿಸಬೇಕು. ಕೃಷಿ ಇಲಾಖೆ, ಪಂಚಾಯತ್ ರಾಜ್ಯ ಇಲಾಖೆ, ಕೆಪಿಸಿ, ಕೆಪಿಟಿಸಿಎಲ್ ಸೇರಿದಂತೆ ಇತರ ಸರ್ಕಾರಿ ಇಲಾಖೆಗಳಲ್ಲಿ ಕನ್ನಡ ಭಾಷೆಯಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಮೊದಲು ಆದ್ಯತೆ ನೀಡಬೇಕು. ಇದರಿಂದ ಸರ್ಕಾರದ ಜೊತೆಗೆ ಕನ್ನಡದಲ್ಲೇ ವ್ಯವಹಾರ ಮಾಡಿ ಉತ್ತಮವಾಗಿ ಕೆಲಸ ನಿರ್ವಹಿಸಲು ಸಹಕಾರಿಯಾಗುತ್ತದೆ ಎಂದು ಪ್ರೊ.ಕರಿಸಿದ್ದಪ್ಪ ಅಭಿಪ್ರಾಯಪಟ್ಟರು.