ಬೆಂಗಳೂರು/ ಬೆಳಗಾವಿ : ರಾಜ್ಯದ ನಾಲ್ಕು ಲಕ್ಷ ರೈತರ ಕೃಷಿ ಪಂಪ್ಸೆಟ್ಗಳಿಗೆ ಸರ್ಕಾರದಿಂದ ಮೂಲಸೌಕರ್ಯ ಕಲ್ಪಿಸಲಾಗುವುದು ಎಂದು ಇಂಧನ ಸಚಿವ ಕೆ ಜೆ ಜಾರ್ಜ್ ಅವರು ವಿಧಾನಸಭೆಯಲ್ಲಿ ಹೇಳಿದರು. ಪ್ರಶ್ನೋತ್ತರ ಕಲಾಪದಲ್ಲಿ ಶಾಸಕರ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು, ನೋಂದಾಯಿಸಲ್ಪಟ್ಟ 500 ಮೀಟರ್ ವ್ಯಾಪ್ತಿಯೊಳಗಡೆ ಇರುವ ಪಂಪ್ ಸೆಟ್‍ಗಳಿಗೆ ವಿದ್ಯುತ್ ಸರಬರಾಜು ಕಂಪನಿಗಳಿಂದ ಮೂಲ ಸೌಕರ್ಯ ಕಲ್ಪಿಸಲಾಗುವುದು ಎಂದರು.
500 ಮೀಟರ್ನಿಂದ ಆಚೆ ಇರುವ ಪಂಪ್ಸೆಟ್ಗಳಿಗೆ ಕೇಂದ್ರ ಸರ್ಕಾರದ ಶೇ. 30 ಹಾಗೂ ರಾಜ್ಯ ಸರ್ಕಾರ ಶೇ. 50 ರಷ್ಟು ಸಬ್ಸಿಡಿ ನೀಡಿ, ಸೋಲಾರ್ ಪಂಪ್ಸೆಟ್ ಅಳವಡಿಸಲು ಕ್ರಮವಹಿಸಲಾಗಿದೆ. ಸೆ. 22ರ ನಂತರ ನೋಂದಾಯಿಸಲ್ಪಡುವ ಐಪಿ ಸೆಟ್‍ಗಳಿಗೆ ಮೂಲಸೌಕರ್ಯಗಳನ್ನು ರೈತರು ಸ್ವಯಂ - ಕಾರ್ಯನಿರ್ವಹಣೆಯಡಿ ತಾವೇ ಮಾಡಿಕೊಳ್ಳಬೇಕು ಎಂಬ ನಿಯಮವಿತ್ತು. ಇದನ್ನು ಮಾರ್ಪಡಿಸಿ, ಸರ್ಕಾರವೇ ಮೂಲ ಸೌಕರ್ಯ ಒದಗಿಸುವ ಪ್ರಸ್ತಾವನೆಯನ್ನು ಸಚಿವ ಸಂಪುಟಕ್ಕೆ ಸಲ್ಲಿಸಲಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಕೃಷಿಗೆ 7 ಗಂಟೆ ವಿದ್ಯುತ್ ನೀಡಲಾಗುತ್ತಿದೆ. ಪ್ರಸಕ್ತ ವರ್ಷದಲ್ಲಿ ಮಳೆ ಕೊರತೆಯಿಂದಾಗಿ ಜಲಮೂಲದಿಂದ ಉತ್ಪತ್ತಿಯಾಗುತ್ತಿದ್ದ ವಿದ್ಯುತ್ ಪ್ರಮಾಣ ಕಡಿಮೆಯಾಗಿದೆ. ಇದರೊಂದಿಗೆ ರಾಜ್ಯದ ವಿದ್ಯುತ್ ಬೇಡಿಕೆ 8000 ಮೆಗಾ ವ್ಯಾಟ್ ನಿಂದ 16500 ಮೆಗಾ ವ್ಯಾಟ್‍ಗೆ ಏರಿಕೆಯಾಗಿ, ವಿದ್ಯುತ್ ಅಭಾವ ಉಂಟಾಗಿತ್ತು. ಹೊರ ರಾಜ್ಯಗಳಿಂದ ಒಪ್ಪಂದ ಮಾಡಿಕೊಂಡು ವಿದ್ಯುತ್ ಖರೀದಿಸಲಾಗಿದೆ. ಇದರೊಂದಿಗೆ ರಾಜ್ಯದ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿಯೂ ಹೆಚ್ಚಿನ ವಿದ್ಯುತ್ ಉತ್ಪಾದನೆ ಮಾಡುತ್ತಿದ್ದು, ಸದ್ಯ ರಾಜ್ಯದಲ್ಲಿ ಯಾವುದೇ ವಿದ್ಯುತ್ ಕೊರತೆ ಇಲ್ಲ. ಅಗತ್ಯಕ್ಕಿಂತ ಹೆಚ್ಚಿನ ವಿದ್ಯುತ್ ಲಭ್ಯವಿದೆ ಎಂದು ಸಚಿವ ಕೆ ಜೆ ಜಾರ್ಜ್ ಸ್ಪಷ್ಟಪಡಿಸಿದರು.