ಬೆಳಗಾವಿ : ರಾಜ್ಯದ ಜನರು ಮೊದಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿದ್ದು, ಇದೀಗ ವಿದ್ಯುತ್ ಬಿಲ್ ಯದ್ವಾತದ್ವಾ ಏರಿಕೆಯಾಗಿ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇದರಿಂದ ಆಕ್ರೋಶಗೊಂಡಿರುವ ಬೆಳಗಾವಿಯ ಚವ್ಹಾಟ ಗಲ್ಲಿಯ ಮಹಿಳೆಯರು ಇಂದು (ಮಂಗಳವಾರ) ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ, ಈಗಾಗಲೇ ಹೆಚ್ಚಿಸಿರುವ ಕರೆಂಟ್ ದರ ಇಳಿಸುವಂತೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಕೈಯಲ್ಲಿ ಕರೆಂಟ್ ಬಿಲ್ ಹಿಡಿದು ಪ್ರತಿಭಟನೆ ನಡೆಸಿದ ಮಹಿಳೆಯರು ಸರ್ಕಾರದ ವಿರುದ್ಧ ಹರಿಹಾಯ್ದರು. ಮಾಧ್ಯಮಗಳ ಜೊತೆಗೆ ಮಾತನಾಡಿದ ಪ್ರತಿಭಟನಾನಿರತ ಮಹಿಳೆ ಶಿಲ್ಪಾ ಬಾಳಾಠಕ್ಕೆ, "ಕಳೆದ ಬಾರಿಗಿಂತ ಈ ಸಲ ಕರೆಂಟ್ ಬಿಲ್ ಬಹಳ ಹೆಚ್ಚು ಬಂದಿದೆ. ಪ್ರತಿಸಲ 500 ರಿಂದ 1000 ರೂ. ಕರೆಂಟ್ ಬಿಲ್ ಬರುತ್ತಿತ್ತು. ಆದರೆ ಇದೀಗ ಎಲ್ಲರಿಗೂ 2 ರಿಂದ 3 ಸಾವಿರ ರೂ. ಬಿಲ್ ಬಂದಿದ್ದು, ದುಡ್ಡು ಇರುವ ಶ್ರೀಮಂತರು ಬಿಲ್ ಕಟ್ಟುತ್ತಾರೆ. ನಾವು ಬಡವರು ಯಾವ ರೀತಿ ಕಟ್ಟುವುದು?. ಶಾಲೆ ಫೀಸ್, ಮನೆ ಬಾಡಿಗೆ ಹೀಗೆ ಎಲ್ಲ ಒಮ್ಮೆಲೇ ಬಂದರೆ ಹೇಗೆ ಬಿಲ್ ಕಟ್ಟಲು ಸಾಧ್ಯ?. ಹೀಗಾಗಿ ಈ ಸಲ ನಾವು ಯಾರೂ ಕರೆಂಟ್ ಬಿಲ್ ಕಟ್ಟುವುದಿಲ್ಲ" ಎಂದು ಆಕ್ರೋಶ ಹೊರಹಾಕಿದರು.
"ನಮ್ಮ ಪತಿ ಬಟ್ಟೆ ಅಂಗಡಿಗೆ ಕೆಲಸಕ್ಕೆ ಹೋಗುತ್ತಿದ್ದು, ಮನೆಯಲ್ಲಿ ಮೂರು ಮಕ್ಕಳಿದ್ದಾರೆ. ಒಬ್ಬೊಬ್ಬರದ್ದು ಕಾಲೇಜು ಫೀಸ್ ಅಂತಾ 30 ರಿಂದ 40 ಸಾವಿರ ರೂ. ಬರುತ್ತದೆ. ಇದರ ಮಧ್ಯೆ ಕರೆಂಟ್ ಬಿಲ್ ಹೆಚ್ಚಾಗಿದೆ. ಬಂದ ಹಣವನ್ನೆಲ್ಲ ಕರೆಂಟ್ ಬಿಲ್‌ಗೆ ಕೊಟ್ಟು ಹೊಟ್ಟೆಗೇನು ತಿನ್ನುವುದು?. ಬಿಲ್ ಕಡಿಮೆ ಮಾಡಬೇಕು. ಇಲ್ಲವೇ ನಾವು ಬಿಲ್ ಕಟ್ಟುವುದಿಲ್ಲ ಎಂದು ಮನವಿ ಮಾಡಲು ಜಿಲ್ಲಾಧಿಕಾರಿ ಕಛೇರಿಗೆ ಬಂದಿದ್ದೇವೆ" ಎಂದು ಶಿಲ್ಪಾ ಹೇಳಿದರು.