ಬೆಳಗಾವಿ : ಬೆಳಗಾವಿ ಉಪಚುನಾವಣೆ ಏ.17 ರಂದು ನಡೆಯಲಿದ್ದು, ಮುನ್ನೆಚ್ಚರಿಕೆಯಾಗಿ ಮಾಧ್ಯಮ ಕಣ್ಗಾವಲು, ಎಂಸಿಸಿ, ಸಿವಿಜಿಲ್ ಕೇಂದ್ರಗಳಿಗೆ ಚುನಾವಣಾ ಸಾಮಾನ್ಯ ವೀಕ್ಷಕ ಅಧಿಕಾರಿ ಡಾ.ಚಂದ್ರಭೂಷಣ್ ತ್ರಿಪಾಠಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಚುನಾವಣಾ ಸಾಮಾನ್ಯ ವೀಕ್ಷಕ ಅಧಿಕಾರಿ ಭೇಟಿ ನಗರದ ವಾರ್ತಾಭವನದಲ್ಲಿ ಸ್ಥಾಪಿಸಲಾಗಿರುವ ಮಾಧ್ಯಮ ಕಣ್ಗಾವಲು ಕೇಂದ್ರದ ಸಮಗ್ರ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡ ಅವರು, ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಅಕ್ರಮಗಳ ಬಗ್ಗೆ ದೂರು ಅಥವಾ ಮಾಹಿತಿ ಲಭಿಸಿದರೆ ಸಂಬಂಧಿಸಿದ ನೋಡಲ್ ಅಧಿಕಾರಿಗಳ ಗಮನಕ್ಕೆ ತರುವಂತೆ ತಿಳಿಸಿದರು.
ಮಾದರಿ ನೀತಿಸಂಹಿತೆ ಜಾರಿ ಬಂದ ದಿನದಿಂದ ಇದುವರೆಗೆ ವಿವಿಧ ದಿನಪತ್ರಿಕೆಗಳಲ್ಲಿ ಪ್ರಕಟವಾಗಿರುವ ವರದಿಗಳ ಪತ್ರಿಕಾ ತುಣುಕುಗಳನ್ನು ಅವರು ಪರಿಶೀಲಿಸಿದರು. ಟಿವಿ ಮಾಧ್ಯಮಗಳು ಹಾಗೂ ಅಧಿಕೃತ ಅಭ್ಯರ್ಥಿಗಳು ಮತ್ತು ಪಕ್ಷಗಳ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುವ ವರದಿಗಳ ಮೇಲೆ ಯಾವ ರೀತಿ ನಿಗಾ ವಹಿಸುತ್ತಿರುವ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು.
ಚುನಾವಣಾ ಸಾಮಾನ್ಯ ವೀಕ್ಷಕ ಅಧಿಕಾರಿ ಭೇಟಿ ಮಾಧ್ಯಮ ಕಣ್ಗಾವಲು ಕೇಂದ್ರದ ಕಾರ್ಯನಿರ್ವಹಣೆ ಕುರಿತು ವಿವರಿಸಿದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಹಾಗೂ ಎಂಸಿಎಂಸಿ ನೋಡಲ್ ಅಧಿಕಾರಿ ಗುರುನಾಥ ಕಡಬೂರ, ಕನ್ನಡ, ಇಂಗ್ಲಿಷ್ ಹಾಗೂ ಮರಾಠಿ ಭಾಷೆಯ 40 ಅಧಿಕ ದಿನಪತ್ರಿಕೆಗಳಲ್ಲಿ ನಿತ್ಯ ಪ್ರಕಟವಾಗುವ ಚುನಾವಣಾ ಸಂಬಂಧಿತ ಸುದ್ದಿ ಜಾಹೀರಾತುಗಳನ್ನು ಪರಿಶೀಲಿಸಲಾಗುತ್ತಿದೆ. ಇದಲ್ಲದೇ ಎಲ್ಲ ಪ್ರಮುಖ ಟಿವಿ ಚಾನೆಲ್‌ಗಳು, ಕೇಬಲ್ ಟಿವಿ ಮತ್ತು ಚುನಾವಣಾ ಅಭ್ಯರ್ಥಿಗಳ ಅಧಿಕೃತ ಸಾಮಾಜಿಕ ಜಾಲತಾಣಗಳ ಅಕೌಂಟ್ ಗಳ ಮೇಲೂ ನಿಗಾ ಇರಿಸಲಾಗಿರುತ್ತದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಆರಂಭಿಸಲಾಗಿರುವ ಮಾದರಿ ನೀತಿ ಸಂಹಿತೆ ಕಂಟ್ರೋಲ್ ರೂಮ್, ಸಿವಿಜಿಲ್ ಹಾಗೂ ದೂರು ನಿರ್ವಹಣಾ ಕೇಂದ್ರಗಳಿಗೂ ಡಾ.ಚಂದ್ರಭೂಷಣ್ ತ್ರಿಪಾಠಿ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಎಂಸಿಸಿ ನೋಡಲ್ ಅಧಿಕಾರಿ ನಿಸಾರ್ ಅಹ್ಮದ್, ನೀತಿಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದ ದೂರು ಹಾಗೂ ಮಾಹಿತಿಯನ್ನು ಆಧರಿಸಿ ನಿಯಮಾವಳಿ ಪ್ರಕಾರ ಕ್ರಮಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಲೋಕಸಭಾ ಉಪ ಚುನಾವಣೆ ಹಿನ್ನೆಲೆ ಸ್ಥಾಪಿಸಲಾಗಿರುವ 27 ಚೆಕ್ ಪೋಸ್ಟ್ ಗಳ ಮೇಲೆ ಕೂಡ ವೆಬ್ ಕ್ಯಾಮೆರಾ ಮೂಲಕ ಇಲ್ಲಿಂದಲೇ ನಿಗಾ ವಹಿಸಲಾಗಿದೆ. ಇದಲ್ಲದೇ ಫ್ಲೈಯಿಂಗ್ ಸ್ಕ್ವಾಡ್ ಗಳ ವಾಹನಗಳಿಗೂ ಜಿಪಿಎಸ್ ಅಳವಡಿಸಿರುವುದರಿಂದ ಪ್ರತಿ ತಂಡಗಳ ಚಲನವಲನಗಳನ್ನು ಕಂಟ್ರೋಲ್ ರೂಮ್ ನಿಂದಲೇ ಪರಿಶೀಲಿಸಲಾಗುತ್ತಿದೆ ಎಂದು ನಿಸಾರ್ ಅಹ್ಮದ್ ತಿಳಿಸಿದರು.