ಚಿಕ್ಕೋಡಿ: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೋಲಾರ ಕ್ಷೇತ್ರದಿಂದ ಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವೆ ಎಂದು ಹೇಳಿದ್ದಾರೆ. ಆದರೆ ಹಲವು ಬಾರಿ ಅವರು ಹೇಳಿದ ಮಾತುಗಳು ಹುಸಿಯಾಗಿವೆ. ನಾಮಪತ್ರ ಸಲ್ಲಿಸಿದ ಮೇಲೆಯೇ ಅವರ ಸ್ಪರ್ಧೆ ಖಚಿತವಾಗುತ್ತದೆ ಎಂದು ಮಾಜಿ ಡಿಸಿಎಂ ಹಾಗೂ ಭಾಜಪ ರಾಜ್ಯ ಉಪಾಧ್ಯಕ್ಷ ಲಕ್ಷ್ಮಣ್ ಸವದಿ ಹೇಳಿದರು. ಅವರು ಬೆಳಗಾವಿ ಜಿಲ್ಲೆ ಅಥಣಿ ಪಟ್ಟಣದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೋಲಾರ ಕ್ಷೇತ್ರದಲ್ಲಿ ಸ್ಪರ್ಧೆ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ಹಲವು ಬಾರಿ ಸಿದ್ದರಾಮಯ್ಯ ಅವರು ನೀಡಿದ್ದ ಹೇಳಿಕೆಗಳು ಹುಸಿಯಾಗಿವೆ. ತಾನು ಕೋಲಾರದಿಂದ ಸ್ಪರ್ಧೆ ಮಾಡುವೆ ಎಂದು ಸಿದ್ಧರಾಮಯ್ಯ ಹೇಳಿದ್ದು, ಎಷ್ಟರ ಮಟ್ಟಿಗೆ ನಿಜವಾಗಿ ಸ್ಪರ್ಧೆ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕು ಎಂದು ತಿಳಿಸಿದ್ದಾರೆ. ಇನ್ನು, ಮೂರು ತಿಂಗಳ ನಂತರ ಯಾವ ನಿರ್ಣಯ ತೆಗೆದುಕೊಳ್ಳುವರು ಎಂಬುದನ್ನೂ ಕಾಯಬೇಕಷ್ಟೇ. ಹಿಂದೆ ಅವರು ಮುಖ್ಯಮಂತ್ರಿ ಆಗುವ ಸಂದರ್ಭದಲ್ಲಿ ಕೊನೆ ಚುನಾವಣೆ ಎಂದು ತಿಳಿಸಿದ್ದರು. ಮತ್ತೆ ನಾನು ಈಗ ಸ್ಪರ್ಧೆ ಮಾಡುವೆ ಎನ್ನುತ್ತಿದ್ದಾರೆ. ಕೋಲಾರದಲ್ಲಿ ಸ್ಪರ್ಧೆ ಮಾಡುವರು ಎಂಬುದರ ಬಗ್ಗೆ ನನಗೆ ಇನ್ನೂ ಅನುಮಾನವಿದೆ.ಕೋಲಾರದಲ್ಲಿ ನಾಮಪತ್ರ ಸಲ್ಲಿಸಿದ ಬಳಿಕವೇ ಅವರು ಸ್ಪರ್ಧಿಸುವುದನ್ನೂ ಖಚಿತವಾಗಿ ಹೇಳಲು ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಸವದಿ ಹೇಳಿದರು.
ಸಂಪುಟ ಪುನಾರಚನೆ ಸಿಎಂಗೆ ಬಿಟ್ಟ ವಿಚಾರ.. ಸಚಿವ ಸಂಪುಟ ಪುನಾರಚನೆ ವಿಚಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ವಿವೇಚನೆಗೆ ಬಿಟ್ಟಿದ್ದು, ಜತೆಗೆ ಭಾರತೀಯ ಜನತಾ ಪಕ್ಷವು ರಾಷ್ಟ್ರೀಯ ಪಕ್ಷ. ದೆಹಲಿಯಲ್ಲಿರುವ ಪಕ್ಷದ ವರಿಷ್ಠರು ಸಚಿವ ಸಂಪುಟ ವಿಸ್ತರಣೆ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಲಕ್ಷ್ಮಣ್ ಸವದಿ ಹೇಳಿದರು.
ಕೋಲಾರದಿಂದ ಸ್ಥರ್ಧೆ ಮಾಡುವೆ-ಸಿದ್ದರಾಮಯ್ಯ..ಸೋಮವಾರ ಕೋಲಾರದಲ್ಲಿಕಾಂಗ್ರೆಸ್ ಪಕ್ಷ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆ.ಹೆಚ್. ಮುನಿಯಪ್ಪ ಸೇರಿದಂತೆ ಎಲ್ಲರೂ ಕೋಲಾರದಿಂದ ಸ್ಥರ್ಧೆ ಮಾಡಬೇಕೆಂದು ಪದೇ ಪದೆ ಮನವಿ ಮಾಡುತ್ತಿದ್ದಾರೆ. ಹೀಗಾಗಿ ಇದೇ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಇಚ್ಛಿಸಿರುವೆ ಎಂದು ಅವರು ಕ್ಷೇತ್ರದ ಜನರಿಗೆ ತಿಳಿಸಿದ್ದರು.