ಕರ್ನಾಟಕ

karnataka

ETV Bharat / state

ಕಿತ್ತೂರು ಉತ್ಸವ-2021ಕ್ಕೆ ಅದ್ಧೂರಿ ಚಾಲನೆ.. ಚೆನ್ನಮ್ಮನ ವೀರಾವೇಷ ಮೆಲುಕು - ಕಿತ್ತೂರು ಉತ್ಸವ

ಕಿತ್ತೂರು ವಿಜಯೋತ್ಸವದ ಸವಿನೆನಪಿಗಾಗಿ ಜಿಲ್ಲೆಯಾದ್ಯಂತ ಸಂಚರಿಸಿದ ವೀರಜ್ಯೋತಿಯನ್ನು ಸಂಭ್ರಮದಿಂದ ಬರಮಾಡಿಕೊಂಡು ಧ್ವಜಾರೋಹಣ ನೆರವೇರಿಸುವ ಮೂಲಕ ಕಿತ್ತೂರು ಉತ್ಸವಕ್ಕೆ ಅದ್ಧೂರಿ ಚಾಲನೆ ನೀಡಲಾಯಿತು.

kitturu fest 2021
ಕಿತ್ತೂರು ಉತ್ಸವ-2021ಕ್ಕೆ ಅದ್ಧೂರಿ ಚಾಲನೆ

By

Published : Oct 23, 2021, 2:21 PM IST

ಬೆಳಗಾವಿ: ಕಿತ್ತೂರು ವಿಜಯೋತ್ಸವದ ಸವಿನೆನಪಿಗಾಗಿ ಜಿಲ್ಲೆಯಾದ್ಯಂತ ಸಂಚರಿಸಿದ ವೀರಜ್ಯೋತಿಯನ್ನು ಸಂಭ್ರಮದಿಂದ ಬರಮಾಡಿಕೊಂಡು ಧ್ವಜಾರೋಹಣ ನೆರವೇರಿಸುವ ಮೂಲಕ ಕಿತ್ತೂರು ಉತ್ಸವಕ್ಕೆ ಅದ್ಧೂರಿ ಚಾಲನೆ ನೀಡಲಾಯಿತು.

ಕಿತ್ತೂರು ಉತ್ಸವ-2021ಕ್ಕೆ ಅದ್ಧೂರಿ ಚಾಲನೆ

ಪ್ರತಿವರ್ಷ ನಡೆಯುವ ಉತ್ಸವದ ಸಂಪ್ರದಾಯದಂತೆ ಚೆನ್ನಮ್ಮನ ಸಮಾಧಿ ಸ್ಥಳ ಬೈಲಹೊಂಗಲದಿಂದ ಹೊರಟು ಜಿಲ್ಲೆಯಾದ್ಯಂತ ಸಂಚರಿಸಿದ ವೀರಜ್ಯೋತಿಯನ್ನು ಕಿತ್ತೂರು ಪಟ್ಟಣದ ಚೆನ್ನಮ್ಮ ವೃತ್ತದಲ್ಲಿ ಸ್ವಾಗತಿಸಲಾಯಿತು. ಸಂಸದೆ ಮಂಗಳಾ ಅಂಗಡಿ ಅವರು ಚೆನ್ನಮ್ಮನ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಬಳಿಕ ಉತ್ಸವದ ಧ್ವಜಾರೋಹಣ ನೆರವೇರಿಸಿ ಜ್ಯೋತಿಯನ್ನು ಬರಮಾಡಿಕೊಂಡರು.

ಮನಸೂರೆಗೊಂಡ ಜನಪದ ಕಲಾವಾಹಿನಿ:

ಜ್ಯೋತಿ ಸ್ವಾಗತದ ಬಳಿಕ ಚೆನ್ನಮ್ನ ಕಿತ್ತೂರಿನ ರಾಜಗುರು ಸಂಸ್ಥಾನ ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಅವರು ಜಾನಪದ ಕಲಾವಾಹಿನಿಗೆ ಚಾಲನೆ ನೀಡಿದರು. ನವಿಲು ನೃತ್ಯ, ಕೇರಳ ತೆಯಮ್ ನೃತ್ಯ, ಚಂಡಮದ್ದಳೆ, ಪೂಜಾ ಕುಣಿತ, ನಂದಿಧ್ವಜ, ಪಟಾಕುಣಿತ, ಚಿಟ್ಟೆಮೇಳ, ಗೊಂಬೆ ಕುಣಿತ, ಝಾಂಜ್ ಪಥಕ ಸೇರಿದಂತೆ ವಿವಿಧ ಕಲಾತಂಡಗಳ ನೂರಾರು ಕಲಾವಿದರು ಕಲಾವಾಹಿನಿಯಲ್ಲಿ ಪಾಲ್ಗೊಂಡಿದ್ದರು.

ಜನಪದ ಗೀತೆಗಳನ್ನು ಹಾಡುತ್ತಾ ಸಾಗಿದ ತಂಡವು ಚೆನ್ನಮ್ಮನ ಶೌರ್ಯ, ಸಾಹಸದ ಗುಣಗಾನ‌ ಮಾಡುವ ಮೂಲಕ ಕಿತ್ತೂರಿನ ಗತವೈಭವವನ್ನು ಮೆಲುಕು ಹಾಕಿತು. ಕಿತ್ತೂರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಕಲಾವಾಹಿನಿಯು ಜನರ ಮನಸೂರೆಗೊಂಡಿತು. ಇದರೊಂದಿಗೆ ವಿವಿಧ ಇಲಾಖೆಯ ಕಾರ್ಯಗಳು ಹಾಗೂ ಯೋಜನೆಗಳ ಅರಿವು ಮೂಡಿಸುವ ಸ್ತಬ್ಧಚಿತ್ರಗಳು ಕೂಡ ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಪೂರ್ಣಕುಂಭ ಹೊತ್ತ ನೂರಾರು ಮಹಿಳೆಯರು ಕಲಾವಾಹಿನಿಯ ಮೆರುಗು ಹೆಚ್ಚಿಸಿದರು. ರಸ್ತೆಯ ಇಕ್ಕೆಗಲಗಳಲ್ಲಿ ನೆರೆದಿದ್ದ ಸಾವಿರಾರು ಜನರು ವಿವಿಧ ಕಲಾತಂಡಗಳ ಪ್ರದರ್ಶನವನ್ನು ವೀಕ್ಷಿಸಿದರು.

ಇದೇ ಸಂದರ್ಭದಲ್ಲಿ ಕಿತ್ತೂರು ಮಹಾದ್ವಾರದ ಬಳಿ ಇರುವ ಶೂರ ಸಂಗೊಳ್ಳಿ ರಾಯಣ್ಣ ಹಾಗೂ ಅಮಟೂರ ಬಾಳಪ್ಪ ಅವರ ಪ್ರತಿಮೆಗಳಿಗೂ ಗಣ್ಯರು ಮಾಲಾರ್ಪಣೆ ಮಾಡಿದರು. ಉತ್ಸವದ ಅಂಗವಾಗಿ ಕಿತ್ತೂರಿನ ಗಡಾದಮರಡಿಯಲ್ಲಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಧ್ವಜಾರೋಹಣ ನೆರವೇರಿಸಿದರು.

ವಸ್ತುಪ್ರದರ್ಶನ ಮೇಳಕ್ಕೆ ಡಿಸಿ ಚಾಲನೆ:

ಉತ್ಸವದ ಪ್ರಯುಕ್ತ ಕಲ್ಮಠದ ಗುರುಶಿದ್ದೇಶ್ವರ ಪ್ರೌಢಶಾಲೆಯ ಆವರಣದಲ್ಲಿ ಏರ್ಪಡಿಸಲಾಗಿರುವ ವಸ್ತುಪ್ರದರ್ಶನ ಮೇಳಕ್ಕೆ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಚಾಲನೆ ನೀಡಿದರು. ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕ್ಷೇತ್ರ ಪ್ರಚಾರ ವಿಭಾಗವು ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಸ್ಥಾಪಿಸಿರುವ ವಿಶೇಷ ಮಳಿಗೆ, ಗ್ರಾಮೀಣಾಭಿವೃದ್ಧಿ ಪಂಚಾಯತ್​ ರಾಜ್, ಕೃಷಿ, ಆರೋಗ್ಯ, ಪಶುಪಾಲನೆ, ತೋಟಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳ ಮಳಿಗೆಗಳನ್ನು ಗಣ್ಯರು ವೀಕ್ಷಿಸಿದರು.

ವಿವಿಧ ಮಹಿಳಾ ಸ್ವಯಂ ಸೇವಾ ಸಂಘಗಳ ಉತ್ಪಾದನಾ ಮಾರಾಟವಾದ ಮಳಿಗೆ, ಆಹಾರ ಪದಾರ್ಥಗಳು, ಖಾದಿ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿದ ಅವರು, ಆಯೋಜಕರಿಂದ ಮಾಹಿತಿಯನ್ನು ಪಡೆದುಕೊಂಡರು. ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಭೀಮಪ್ಪ ಅವರು ಮಳಿಗೆಗಳ ಕುರಿತು ವಿವರಿಸಿದರು.

ಚೆನ್ನಮ್ನ ಕಿತ್ತೂರಿನ ರಾಜಗುರು ಸಂಸ್ಥಾನ ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಸಮ್ಮುಖದಲ್ಲಿ ನಡೆದ ಈ ಎಲ್ಲ ಕಾರ್ಯಕ್ರಮಗಳಲ್ಲಿ ಶಾಸಕ ಮಹಾಂತೇಶ ದೊಡ್ಡಗೌಡರ, ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಎಚ್.ವಿ, ಬೈಲಹೊಂಗಲ ಉಪ ವಿಭಾಗಾಧಿಕಾರಿ ಶಶಿಧರ್ ಬಗಲಿ, ವಾರ್ತಾ ಇಲಾಖೆಯ ಉಪ ನಿರ್ದೇಶಕ ಗುರುನಾಥ ಕಡಬೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವಿದ್ಯಾವತಿ ಭಜಂತ್ರಿ ಇದ್ದರು.

ಆಮಂತ್ರಣ ಪತ್ರಿಕೆ ಪಾಲಿಟಿಕ್ಸ್?!

ಕಿತ್ತೂರು ಉತ್ಸವ ಉದ್ಘಾಟನಾ ಕಾರ್ಯಕ್ರಮಕ್ಕೆ ಸ್ವಾಮೀಜಿಗಳ ದಿವ್ಯಸಾನಿಧ್ಯ ವಿಚಾರವಾಗಿ ಗೊಂದಲ ಸೃಷ್ಟಿಯಾಗಿದೆ. ಇಂದು ಸಂಜೆ ನಡೆಯುವ ಕಿತ್ತೂರು ಉತ್ಸವ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಿಚಾರವಾಗಿ ಒಂದಲ್ಲ ಎರಡಲ್ಲ ಮೂರು ಬಾರಿ ಆಮಂತ್ರಣ ಪತ್ರಿಕೆ ಮುದ್ರಣ ಮಾಡಿದ್ದಾರೆ. ಇದಲ್ಲದೇ ಕಿತ್ತೂರು ಉತ್ಸವ ದಿನದಂದೇ ಮೂರನೇ ಆಮಂತ್ರಣ ಪತ್ರ ಮುದ್ರಣಕ್ಕೆ ಸಿದ್ಧತೆ ನಡೆಸಿದ್ದಾರೆ.

ಇದನ್ನೂ ಓದಿ:ಕಿತ್ತೂರು ರಾಣಿ ಚೆನ್ನಮ್ಮಳ ತ್ಯಾಗ, ಬಲಿದಾನ ಯುವ ಪೀಳಿಗೆಗೆ ಮಾದರಿ: ಸಿಎಂ ಬೊಮ್ಮಾಯಿ

ಮೊದಲಿನ ಆಮಂತ್ರಣ ಪತ್ರಿಕೆಯಲ್ಲಿ ಕೇವಲ ಕಿತ್ತೂರು ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಸಾನಿಧ್ಯ ವಹಿಸಿ ಮುದ್ರಣ ಮಾಡಲಾಗಿತ್ತು. ಇದಾದ ಬಳಿಕ ಎರಡನೇ ಆಮಂತ್ರಣ ಪತ್ರಿಕೆಯಲ್ಲಿ‌ ಪಂಚಮಸಾಲಿ ಪೀಠದ ಇಬ್ಬರು ಸ್ವಾಮೀಜಿಗಳಾದ ಕೂಡಲಸಂಗಮ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹಾಗೂ ಹರಿಹರ ಪೀಠದ ವಚನಾನಂದ ಸ್ವಾಮೀಜಿಗಳ ಹೆಸರು ಸೇರ್ಪಡೆ ಮಾಡಿ ಮುದ್ರಣ ಮಾಡಲಾಗಿತ್ತು. ಪಂಚಮಸಾಲಿ ಪೀಠದ ಜಗದ್ಗುರುಗಳ ಓಲೈಕೆಗೆ ರಾಜ್ಯ ಸರ್ಕಾರ ಮುಂದಾಯ್ತಾ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದ್ದಲ್ಲದೇ ಮೂರು ಬಾರಿ ಆಮಂತ್ರಣ ಪತ್ರಿಕೆ ಮುದ್ರಣ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಪ್ರತಿ ವರ್ಷ ಕಿತ್ತೂರು ಕಲ್ಮಠದ ಶ್ರೀಗಳೇ ಚನ್ನಮ್ಮನ ಉತ್ಸವಕ್ಕೆ ದಿವ್ಯ ಸಾನಿಧ್ಯ ವಹಿಸುತ್ತ ಬಂದಿರುವುದು ಸಂಪ್ರದಾಯ. ಆದರೆ ಈ ಬಾರಿ ಮೂರು ಆಮಂತ್ರಣ ಪತ್ರಿಕೆ ಪ್ರಕಟಿಸಿದ ಕುರಿತು ಚರ್ಚೆ ಗರಿಗೆದರಿದೆ.

ABOUT THE AUTHOR

...view details