ಬೆಳಗಾವಿ: ನಗರದ ಬಿಮ್ಸ್ ಆಸ್ಪತ್ರೆಯಲ್ಲಿ ಕೋವಿಡ್-19 ಲಸಿಕಾಕರಣ ಅಭಿಯಾನಕ್ಕೆ ಶಾಸಕರಾದ ಅನಿಲ ಬೆನಕೆ, ಅಭಯ್ ಪಾಟೀಲ ಚಾಲನೆ ನೀಡಿದರು.
ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ರಮೇಶ ಎಂಬುವವರು ಮೊದಲ ಕೋವಿಶೀಲ್ಡ್ ಲಸಿಕೆ ಪಡೆದುಕೊಂಡರು. ಈ ವೇಳೆ ಶಾಸಕರಾದ ಅನಿಲ ಬೆನಕೆ ಹಾಗೂ ಅಭಯ್ ಪಾಟೀಲ್ ಹೂಗುಚ್ಛ ನೀಡಿ ಅವರಿಗೆ ಶುಭ ಹಾರೈಸಿದರು.
ಬೆಳಗಾವಿಯಲ್ಲಿ ಕೋವಿಡ್-19 ಲಸಿಕಾಕರಣ ಅಭಿಯಾನಕ್ಕೆ ಚಾಲನೆ ಡಿಎಚ್ಒ ಶಶಿಕಾಂತ್ ಮುನ್ಯಾಳ ಮಾತನಾಡಿ, ಜಿಲ್ಲೆಗೆ ಈಗಾಗಲೇ ಪುಣೆಯ ಸೀರಂ ಇನ್ಸ್ಟಿಟ್ಯೂಟ್ ಅಭಿವೃದ್ಧಿ ಪಡಿಸಿರುವ 35,960 ಕೋವಿಶೀಲ್ಡ್ ಲಸಿಕೆಗಳು ಬಂದಿದ್ದು, 49 ಸಾವಿರ ಜನರು ನೋಂದಣಿ ಮಾಡಿಕೊಂಡಿದ್ದಾರೆ. ನೋಂದಣಿ ಮಾಡಿಕೊಂಡವರಿಗೆ ಸದ್ಯಕ್ಕೆ 13 ಕೇಂದ್ರಗಳಲ್ಲಿ ಕೊರೊನಾ ವ್ಯಾಕ್ಸಿನೇಷನ್ ಮಾಡಲಾಗುತ್ತಿದೆ. ಮೊದಲ ಹಂತದಲ್ಲಿ ಕೋಲ್ಡ್ ಚೈನ್ ಸೆಂಟರ್‌ಗಳಿಗೆ 10 ಸಾವಿರ ಲಸಿಕೆಗಳ ಪೂರೈಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಬೆಳಗಾವಿ ನಗರದ ಬಿಮ್ಸ್ ಆಸ್ಪತ್ರೆ, ವಂಟಮುರಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಅಥಣಿ ತಾಲೂಕು ಆಸ್ಪತ್ರೆ, ಬೈಲಹೊಂಗಲ ಸಾರ್ವಜನಿಕ ಆಸ್ಪತ್ರೆ, ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆ, ಗೋಕಾಕ್ ಸಾರ್ವಜನಿಕ ಆಸ್ಪತ್ರೆ, ಹುಕ್ಕೇರಿ ತಾಲೂಕು ಆಸ್ಪತ್ರೆ, ಖಾನಾಪುರ ಸಾರ್ವಜನಿಕ ಆಸ್ಪತ್ರೆ, ರಾಯಬಾಗ ಸಾರ್ವಜನಿಕ ಆಸ್ಪತ್ರೆ, ರಾಮದುರ್ಗ ಸಾರ್ವಜನಿಕ ಆಸ್ಪತ್ರೆ, ಸವದತ್ತಿ ಸಾರ್ವಜನಿಕ ಆಸ್ಪತ್ರೆ, ಕೊಣ್ಣೂರು ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಬೆಳಗಾವಿಯ ಕೆಎಲ್ಇ ಪ್ರಭಾಕರ್ ಕೋರೆ ಚಾರಿಟೇಬಲ್ ಆಸ್ಪತ್ರೆಯಲ್ಲಿ ತಲಾ 100 ರಂತೆ ಒಟ್ಟು 1,300 ಆರೋಗ್ಯ ಕಾರ್ಯಕರ್ತರಿಗೆ ವ್ಯಾಕ್ಸಿನೇಷನ್ ಕೊಡಲಾಗುತ್ತಿದೆ.
ಈ ಸುದ್ದಿಯನ್ನೂ ಓದಿ:ಲಸಿಕೆ ಪಡೆಯಲು ಹಿಂದೇಟು ಹಾಕಿದ ಸ್ಟಾಫ್ ನರ್ಸ್: ಧೈರ್ಯ ತುಂಬಿದ ಸಚಿವ ಶ್ರೀರಾಮುಲು
ಲಸಿಕೆ ನೀಡುವುದರ ಬಗ್ಗೆ ಈ ಮೊದಲೇ ಸಿಬ್ಬಂದಿಗೆ ತರಬೇತಿ ಕೊಡಲಾಗಿದೆ. ಲಸಿಕೆ ಪಡೆದವರನ್ನು ಮುಂಜಾಗ್ರತಾ ಕ್ರಮವಾಗಿ ಅರ್ಧ ಗಂಟೆವರೆಗೆ ಕೇಂದ್ರದಲ್ಲೇ ಇರಿಸಿಕೊಂಡು ನಿಗಾ ವಹಿಸಲಾಗುತ್ತಿದೆ. ಲಸಿಕೆ ಪಡೆದವರಲ್ಲಿ ಏನಾದರೂ ಆರೋಗ್ಯ ಸಮಸ್ಯೆ ಕಂಡು ಬಂದರೆ ತುರ್ತು ನಿಗಾ ಘಟಕಕ್ಕೆ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಿಕೊಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಇದಲ್ಲದೇ ಜಿಲ್ಲೆಯಲ್ಲಿ ಹಂತ ಹಂತವಾಗಿ ಒಟ್ಟು 180 ಕೇಂದ್ರಗಳಲ್ಲಿ 30ಸಾವಿರ ಆರೋಗ್ಯ ಸೇವಾ ಸಿಬ್ಬಂದಿ, ವೈದ್ಯಕೀಯ ಕಾಲೇಜು ಹಾಗೂ ನರ್ಸಿಂಗ್ ಕಾಲೇಜುಗಳ ವಿದ್ಯಾರ್ಥಿಗಳಿಗೆ ಲಸಿಕೆ ನೀಡಲು ಯೋಜಿಸಲಾಗಿದೆಯೆಂದು ಸಂಪೂರ್ಣ ಮಾಹಿತಿ ನೀಡಿದರು.