ಬೆಳಗಾವಿ: ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ(ಡಿಹೆಚ್ಒ)ಯಲ್ಲಿ ಸಿಬ್ಬಂದಿ ಎಣ್ಣೆ ಪಾರ್ಟಿ ಮಾಡಿರುವ ಆರೋಪ ಕೇಳಿ ಬಂದಿದೆ. ಸಿಬ್ಬಂದಿ ಮದ್ಯಪಾನ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ಭಾರೀ ಟೀಕೆ ವ್ಯಕ್ತವಾಗಿದೆ.
ನಗರದ ಟಿಳಕವಾಡಿಯಲ್ಲಿರುವ ಡಿಹೆಚ್ಒ ಕಚೇರಿ ಹಿಂಭಾಗದಲ್ಲಿರುವ ಕೊಠಡಿಯಲ್ಲಿನ ಗಾಂಧಿಜೀ ಫೋಟೋ ಎದುರಿಗೆಯೇ ಸಿಬ್ಬಂದಿ ಮದ್ಯಪಾನ ಮಾಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಆದರೆ, ಈ ಘಟನೆ ಯಾವಾಗ ನಡೆದಿದೆ ಎಂಬ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಈ ವಿಡಿಯೋದಲ್ಲಿ ಸಿಬ್ಬಂದಿ ಸಾರಾಯಿ ಕುಡಿಯುತ್ತಿರುವುದು, ಸಿಗರೇಟು ಸೇದುತ್ತಿರುವುದು, ಡ್ಯಾನ್ಸ್ ಹಾಗೂ ಹರಟೆ ಹೊಡೆಯುತ್ತಿರುವುದನ್ನು ಕಾಣಬಹುದು. ಎಣ್ಣೆ ಪಾರ್ಟಿಯಲ್ಲಿ 6 ಜನ ಸಿಬ್ಬಂದಿ ಭಾಗಿಯಾಗಿದ್ದಾರೆ ಎಂದು ಹೇಳಲಾಗಿದೆ.