ಬೆಳಗಾವಿ:ಬೆಳಗಾವಿ ಹೊರವಲಯದ ಮಚ್ಛೆ ಗ್ರಾಮದಲ್ಲಿ ವಾರದ ಹಿಂದೆ ನಡೆದಿದ್ದ ಮಹಿಳೆಯರ ಜೋಡಿ ಕೊಲೆ ಪ್ರಕರಣದ ಹಂತಕರನ್ನು ನಗರ ಪೊಲೀಸರು ಬಂಧಿಸಿದ್ದಾರೆ. ಮಹಿಳೆಯರ ಜೋಡಿ ಕೊಲೆ ಹಿಂದೆ ಮತ್ತೋರ್ವ ಮಹಿಳೆಯ ಸಂಚಿತ್ತು ಹಾಗೂ ಜೋಡಿ ಕೊಲೆಗೆ ಅನೈತಿಕ ಸಂಬಂಧವೇ ಪ್ರಮುಖ ಕಾರಣ ಎಂಬುವುದು ತನಿಖೆಯಿಂದ ದೃಢಪಟ್ಟಿದೆ.
ಮಚ್ಛೆಯ ಲಕ್ಷ್ಮಿ ನಗರದಲ್ಲಿ ವಾಯು ವಿಹಾರ ಮಾಡುತ್ತಿದ್ದ ರೋಹಿನಿ ಹುಲಮನಿ (21) ಹಾಗೂ ರಾಜಶ್ರೀ ಬನ್ನಾರ (21) ಅವರ ಬರ್ಬರ ಹತ್ಯೆಯಾಗಿತ್ತು. ಈ ಪ್ರಕರಣ ಸಂಬಂಧ ಬೆಳಗಾವಿ ತಾಲೂಕಿನ ಕಾಳ್ಯಾನಟ್ಟಿ ಗ್ರಾಮದ ಕಲ್ಪನಾ ಮಲ್ಲೇಶ ಬಸರಿಮರದ (35), ಚಂದಗಡ ತಾಲೂಕಿನ ಸುರತೆ ಗ್ರಾಮದ ಮಹೇಶ ಮೊನಪ್ಪ ನಾಯಿಕ (20), ಬೆಳಗುಂದಿ ಗ್ರಾಮದ ರಾಹುಲ್ ಮಾರುತಿ ಪಾಟೀಲ್ (19) ಗಣೇಪುರದ ರೋಹಿತ ವಡ್ಡರ (21) ಹಾಗೂ ಕಾಳ್ಯಾನಟ್ಟಿಯ ಶಾನೂರ ಬನ್ನಾರ (18) ಎಂಬುವವರನ್ನು ಬಂಧಿಸಲಾಗಿದೆ.
ಕಲ್ಪನಾ ಕಹಾನಿಗೆ ಜೋಡಿ ಕೊಲೆ!
ಜೋಡಿ ಕೊಲೆ ಪ್ರಕರಣದ ಮೊದಲನೇ ಆರೋಪಿ ಕಲ್ಪನಾ ಬಸರೀಮರದ ಹಾಗೂ ಮೃತ ರೋಹಿನಿ ಪತಿ ಗಂಗಪ್ಪ ಹುಲಮನಿ ಮಧ್ಯೆ ಅನೈತಿಕ ಸಂಬಂಧ ಇತ್ತು. ಬಳಿಕ ಕಲ್ಪನಾಳಿಂದ ದೂರವಾಗಿದ್ದ ಗಂಗಪ್ಪ ರೋಹಿನಿ ಜತೆಗೆ ವಿವಾಹವಾಗಿದ್ದನು. ಅಲ್ಲದೇ ರೋಹಿನಿ ಐದು ತಿಂಗಳ ಗರ್ಭಣಿ ಆಗಿದ್ದಳು. ಮದುವೆ ಮುಂಚೆ ಗಂಗಪ್ಪನಿಗೆ ಆರ್ಥಿಕ ಸಹಾಯ ಮಾಡುತ್ತಿದ್ದ ಕಲ್ಪನಾ ಅನೈತಿಕ ಸಂಬಂಧ ಬೆಳೆಸಿದ್ದಳು. ವಿವಾಹದ ಬಳಿಕ ಗಂಗಪ್ಪ ದೂರವಾಗಿದ್ದನ್ನು ಸಹಿಸಿಕೊಳ್ಳಲು ಕಲ್ಪನಾಳಿಗೆ ಆಗಿಲ್ಲ. ಈ ಹಿಂದೆ ನೀಡಲಾಗಿದ್ದ ಹಣ ಮರಳಿಸುವಂತೆ ಗಂಗಪ್ಪನಿಗೆ ಕಲ್ಪನಾ ಸತಾಯಿಸುತ್ತಿದ್ದಳು. ಗಂಗಪ್ಪನ ಜತೆಯೇ ಸಂಬಂಧ ಮುಂದುವರೆಸಲು ಹಠಕ್ಕೆ ಬಿದ್ದ ಕಲ್ಪನಾ ರೋಹಿನಿ ಕೊಲೆಗೆ ಸಂಚು ರೂಪಿಸುತ್ತಾಳೆ. ಸಹೋದರಿ ಪುತ್ರ ಮಹೇಶ್ ಕೂಡ ಇದಕ್ಕೆ ಸಾಥ್ ನೀಡುತ್ತಾನೆ. ಈ ವಿಷಯವನ್ನು ಮಹೇಶ ಸಂಬಂಧಿಕರ ಬಳಿ ಹೇಳಿ ಕೊಲೆಗೆ ಸಂಚು ರೂಪಿಸುತ್ತಾರೆ.
ಸಾಕ್ಷ್ಯ ನಾಶಕ್ಕೆ ರಾಜಶ್ರೀ ಹತ್ಯೆ!
ಸೆ.26 ಸಂಜೆ 4 ಗಂಟೆಗೆ ಗರ್ಭಿಣಿ ರೋಹಿನಿ ಸ್ನೇಹಿತೆ ರಾಜಶ್ರೀ ಜತೆಗೆ ಮಚ್ಛೆಯ ಲಕ್ಷ್ಮಿನಗರದಲ್ಲಿ ವಾಯುವಿಹಾರ ಮಾಡುತ್ತಿದ್ದ ವೇಳೆ ಬೈಕ್ನಲ್ಲಿ ಬಂದ ನಾಲ್ವರ ತಂಡ ಮೊದಲು ಇಬ್ಬರ ಕಣ್ಣಿಗೆ ಕಾರದಪುಡಿ ಎರಚಿ, ಮೊದಲು ರೋಹಿನಿ ಹತ್ಯೆಮಾಡಿ ನಂತರ ಸಾಕ್ಷ್ಯ ನಾಶಪಡಿಸಲು ರಾಜಶ್ರೀ ಬನ್ನಾರ ಅವಳನ್ನೂ ಹತ್ಯೆಗೈದಿದ್ದಾರೆ.
ಗಂಗಪ್ಪ ಹಾಗೂ ಕಲ್ಪನಾ ಮಧ್ಯೆ ವಿವಾಹ ಪೂರ್ವ ಇದ್ದ ದೈಹಿಕ ಸಂಬಂಧ ಜೋಡಿ ಕೊಲೆಗೆ ಕಾರಣವಾಗಿದೆ. ಹಂತಕರು ಜೈಲು ಸೇರಿದ್ರೆ ಅಮಾಯಕ ರಾಜಶ್ರೀ ಬನ್ನೂರ ಘಟನೆಯಲ್ಲಿ ಪ್ರಾಣ ಕಳೆದುಕೊಂಡಿದ್ದು ಮಾತ್ರ ವಿಪರ್ಯಾಸವೇ ಸರಿ. ಗ್ರಾಮೀಣ ವಿಭಾಗದ ಎಸಿಪಿ ನೇತೃತ್ವದಲ್ಲಿ ತಂಡ ರಚಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಡಿಸಿಪಿ ವಿಕ್ರಮ ಆಮಟೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.