ಬೆಳಗಾವಿ: ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಸಚಿವ ಸ್ಥಾನ ಒದಗಿ ಬಂದಿದೆ. ಇಂದು ರಾಜಭವನದಲ್ಲಿ 24 ಸಚಿವರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದ್ದು, ಇದೇ ಖುಷಿಯಲ್ಲಿರುವ ಲಕ್ಷ್ಮೀಗೆ ಇದೀಗ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಹೆಬ್ಬಾಳ್ಕರ್ ಮನೆಗೆ ಮಹಾಲಕ್ಷ್ಮೀಯ ಆಗಮನವಾಗಿದೆ.
ಇಂದು ಬೆಂಗಳೂರಿನ ರಾಜಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನೂತನ ಸಚಿವೆಯಾಗಿ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ನಿನ್ನೆ ರಾತ್ರಿ ಹೊಸ ಸಚಿವರ ಪಟ್ಟಿ ಬಿಡುಗಡೆ ಆಗುತ್ತಿದ್ದಂತೆ ಸಂತಸ ವ್ಯಕ್ತಪಡಿಸಿದ್ದ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿತ್ತು. ಹೆಬ್ಬಾಳ್ಕರ್ ಪುತ್ರ ಮೃಣಾಲ್ ಅವರ ಪತ್ನಿ ಹಿತಾ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ನಿನ್ನೆ ರಾತ್ರಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಮೂಲಕ ಲಕ್ಷ್ಮೀ ಅಜ್ಜಿಯಾಗಿದ್ದಾರೆ. ಒಂದೆಡೆ ಮನೆಗೆ ಮಹಾಲಕ್ಷ್ಮೀ ಬಂದ ಖುಷಿಯಾದ್ರೆ ಅದೇ ದಿನ ಮಂತ್ರಿ ಸ್ಥಾನ ಸಿಕ್ಕ ಖುಷಿಯೂ ಸಂಭ್ರಮವನ್ನು ಇಮ್ಮಡಿಗೊಳಿಸಿದೆ.
ಹೆಬ್ಬಾಳ್ಕರ್ ರಾಜಕೀಯ ಹಾದಿ:ಸಿದ್ದರಾಮಯ್ಯ ಸಂಪುಟದಲ್ಲಿ ಮಂತ್ರಿ ಸ್ಥಾನ ಪಡೆದಿರುವ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ರಾಜಕೀಯ ಹಾದಿ ಅಷ್ಟು ಸುಗಮವಾಗಿರಲಿಲ್ಲ. ಎಲ್ಲಾ ಅಡೆ ತಡೆ ದಾಟಿ ಇಂದು ಹೆಬ್ಬಾಳ್ಕರ್ ಸಚಿವರಾಗುತ್ತಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ ನೆಲಕಚ್ಚಿದ ವೇಳೆ ಹತಾಶರಾಗದೇ ಜಿಲ್ಲಾಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನು ಹೊತ್ತುಕೊಂಡು ಹೆಬ್ಬಾಳ್ಕರ್ ಶ್ರಮಿಸಿದ್ದಾರೆ. ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷರಾಗಿ, ಮಹಿಳೆಯರನ್ನು ಒಗ್ಗೂಡಿಸಿ ಮಹಿಳಾ ಘಟಕವನ್ನು ಬಲಿಷ್ಠಗೊಳಿಸಿದ್ದರು.
ಕಳೆದ ವಿಧಾನಪರಿಷತ್ ಚುನಾವಣೆಯಲ್ಲಿ ಸಹೋದರ ಚನ್ನರಾಜ ಹಟ್ಟಿಹೊಳಿ ಗೆಲುವಿನಲ್ಲೂ ಲಕ್ಷ್ಮೀ ಪಾತ್ರ ಪ್ರಮುಖವಾಗಿದೆ. ಲಕ್ಷ್ಮೀ ಹೆಬ್ಬಾಳಕರ್ ಕೇವಲ ರಾಜಕೀಯವಾಗಿ ಮಾತ್ರ ಬೆಳೆದು ನಿಂತಿಲ್ಲ. ಸಾಮಾಜಿಕ ಮುಂದಾಳುವಾಗಿದ್ದಾರೆ, ಒಬ್ಬ ಯಶಸ್ವಿ ಉದ್ಯಮಿಯಾಗಿದ್ದಾರೆ. ಸಕ್ಕರೆ ಕಾರ್ಖಾನೆಗಳನ್ನು ಕಟ್ಟಿ ನಿಲ್ಲಿಸಿದ್ದಾರೆ. ರಿಯಲ್ ಎಸ್ಟೇಟ್ನಲ್ಲೂ ಛಾಪು ಮೂಡಿಸಿದ್ದಾರೆ. ಸಹಕಾರಿ ಸಂಘ ಕಟ್ಟಿ ಬೆಳೆಸುತ್ತಿದ್ದಾರೆ. ಕ್ಷೇತ್ರದ ಜನರ ಆರೋಗ್ಯಕ್ಕೆ ಬೆಂಬಲವಾಗಿ ನಿಲ್ಲಲು ಆಸ್ಪತ್ರೆಯೊಂದನ್ನು ಕಟ್ಟುವ ಬೃಹತ್ ಯೋಜನೆಯನ್ನು ಹೊಂದಿದ್ದಾರೆ. ಇದೀಗ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗುವ ಮೂಲಕ ರಾಜಕೀಯವಾಗಿ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತಷ್ಟು ಬಲಿಷ್ಠವಾಗಿ ಬೆಳೆಯಲಿದ್ದಾರೆ.