ಬೆಳಗಾವಿ: "ವೀರರಾಣಿ ಕಿತ್ತೂರು ಚನ್ನಮ್ಮಾಜಿಯನ್ನು ಒಂದೇ ಜಾತಿ ಮತ್ತು ಸಮುದಾಯಕ್ಕೆ ಸೀಮಿತಗೊಳಿತ್ತಿರುವ ವಿಚಾರ ಕಳೆದ ಐದು ವರ್ಷಗಳಿಂದ ಶುರುವಾಗಿದೆ. ಇದನ್ನು ಮೊಳಕೆಯೊಡೆಯುವ ಮೊದಲೇ ಚಿವುಟಿ ಹಾಕುವ ಅವಶ್ಯಕತೆಯಿದೆ" ಎಂದು ಸಂಶೋಧಕ ಸಂತೋಷ ಹಾನಗಲ್ ಅಭಿಪ್ರಾಯ ವ್ಯಕ್ತಪಡಿಸಿದರು. ಕಿತ್ತೂರು ಉತ್ಸವದ ಅಂಗವಾಗಿ ಮಂಗಳವಾರ ನಡೆದ ವಿಚಾರಗೋಷ್ಠಿಯಲ್ಲಿ ಮಾತನಾಡಿದ ಅವರು, "ರಾಣಿ ಚನ್ನಮ್ಮಾಜಿ ಜತೆ ಸೇರಿಕೊಂಡು ಎಲ್ಲ ಸಮುದಾಯದ ವೀರರು ಸಂಸ್ಥಾನದ ಉಳಿವಿಗಾಗಿ ಹೋರಾಡಿದ್ದಾರೆ. ಅವರೆಲ್ಲ ಇಡೀ ದೇಶಕ್ಕೆ ಸೇರಿದ ಮಹಾಪುರುಷರು. ಅಂತಹವರನ್ನು ಒಂದೇ ಜಾತಿ, ಸಮುದಾಯಕ್ಕೆ ಸೀಮಿತಗೊಳಿಸಬಾರದು" ಎಂದರು.
"ಬ್ರಿಟಿಷರ ವಿರುದ್ಧ ಯುದ್ಧದಲ್ಲಿ ದಿಗ್ವಿಜಯ ಸಾಧಿಸಿದ ವೀರರಾಣಿ ಚನ್ನಮ್ಮನ ವಿಜಯೋತ್ಸವಕ್ಕೆ ಮುಂದಿನ ವರ್ಷ 200 ವರ್ಷ ತುಂಬಲಿದ್ದು, ವಿಜಯೋತ್ಸವದ ದ್ವಿಶತಮಾನೋತ್ಸವ ಅದ್ಧೂರಿಯಾಗಿ ನಡೆಯಬೇಕು. ಸದ್ಯ ಇಲ್ಲಿರುವುದು ಅರಮನೆಯ ಕೋಟೆ. ದೊಡ್ಡ ಸಂಸ್ಥಾನವಾಗಿದ್ದ ಕಿತ್ತೂರಿನ ಸಂಸ್ಥಾನದ ಬೇರೆ ಕೋಟೆ ಇರಬಹುದು. ಅದರ ಶೋಧಕಾರ್ಯ ನಡೆಯಬೇಕು. ಅಷ್ಟೇ ಅಲ್ಲದೇ ಪ್ರತಿರೂಪ ಅರಮನೆ ನಿರ್ಮಾಣಕ್ಕೆ ಚಾಲನೆ ನೀಡಬೇಕು. ಇತಿಹಾಸದಲ್ಲಿ ಹುದುಗಿ ಹೋಗಿರುವ ಮತ್ತಷ್ಟು ಕಿತ್ತೂರು ಯೋಧರ ಬಗ್ಗೆ ಸಂಶೋಧನೆ ಅವಶ್ಯಕತೆಯಿದೆ" ಎಂದು ಹೇಳಿದರು.
ವಿಚಾರಗೋಷ್ಠಿಗೆ ಚಾಲನೆ ನೀಡಿ ಮಾತನಾಡಿದ ಶಾಸಕ ಬಾಬಾಸಾಹೇಬ ಪಾಟೀಲ, "ಕಿತ್ತೂರು ಸಂಸ್ಥಾನದ ವಿಷಯ ಸೀಮಿತ ಮಟ್ಟಕ್ಕೆ ಬಂದು ತಲುಪಿದೆ. ಈ ವಿಚಾರಗೋಷ್ಠಿಯಲ್ಲಿ ಅಭಿಪ್ರಾಯ ಪಟ್ಟ ಇತಿಹಾಸ ತಜ್ಞರ ಸಲಹೆಗಳನ್ನು ಪಡೆದುಕೊಂಡು, ಹೊಸ ಯೋಜನೆಯೊಂದಿಗೆ ಕೆಲಸ ಮಾಡಲಾಗುವುದು. ಕಿತ್ತೂರಿನ ಇತಿಹಾಸ ಮನೆ ಮನೆಗೆ ತಲುಪಿಸಲು ನಾವು ಬದ್ಧ" ಎಂದು ತಿಳಿಸಿದರು.