ಬೆಳಗಾವಿ : ಬೀಮ್ಸ್ ಆಸ್ಪತ್ರೆಯ ಕೋವಿಡ್ ತುರ್ತು ಪರಿಸ್ಥಿತಿಗೆ ಜನರಿಗೆ ಸಮಯಕ್ಕೆ ಸರಿಯಾಗಿ ಸೂಕ್ತ ಚಿಕಿತ್ಸೆ ಹಾಗೂ ಕೋವಿಡ್ ರೋಗಿಗಳಿಗೆ ಆಕ್ಸಿಜನ್ ಇಲ್ಲದೇ ಪರದಾಡುವಂತಾಗಿದೆ.
ನಗರದ ಬೀಮ್ಸ್ ಆಸ್ಪತ್ರೆಯ ಕಾರ್ಯವೈಖರಿ, ವಸ್ತುಸ್ಥಿತಿಗೂ ಜಿಲ್ಲಾಡಳಿತದ ಹೇಳಿಕೆಗೂ ಒಂದಕ್ಕೊಂದು ಸಂಬಂಧವೇ ಇಲ್ಲದಂತಾಗಿದೆ.
ಗ್ರಾಮೀಣ ಪ್ರದೇಶ ಸೇರಿ ನಗರದ ಪ್ರದೇಶದ ಜನರು ಸೂಕ್ತ ಚಿಕಿತ್ಸೆಗೆಂದು ಬೆಳಗಾವಿ ಬೀಮ್ಸ್ ಆಸ್ಪತ್ರೆಗೆ ಕರೆತಂದ ಯಾವ ರೋಗಿಗಳಿಗೂ ಸರಿಯಾದ ವೇಳೆಗೆ ತುರ್ತು ಚಿಕಿತ್ಸೆ ಸಿಗುತ್ತಿಲ್ಲ.
ಈ ಹಿನ್ನೆಲೆ ಕಫ ಸಮಸ್ಯೆಯಿಂದ ಬೀಮ್ಸ್ ಆಸ್ಪತ್ರೆಗೆ ಕರೆತಂದ ಶಿವಾಜಿ ನಗರದ ನಿವಾಸಿ ರವಿ ಬೆಟಗೇರಿ (45) ಆಸ್ಪತ್ರೆಗೆ ದಾಖಲಾದ ಕೆಲಹೊತ್ತಿನಲ್ಲಿಯೇ ಸಾವಿನ ಮನೆ ಸೇರಿದ್ದಾರೆ.
ಇತ್ತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಬೀಮ್ಸ್ ಆಸ್ಪತ್ರೆಯಲ್ಲಿ ಸರಿಯಾದ ವೇಳೆಗೆ ಚಿಕಿತ್ಸೆ ದೊರೆಯುತ್ತಿಲ್ಲ. ತುರ್ತು ಚಿಕಿತ್ಸೆ ಅಗತ್ಯವಿದ್ದರೂ ನಿರ್ಲಕ್ಷಿಸಲಾಗುತ್ತಿದೆ ಎಂದು ದೂರಿದರು.
ಮತ್ತೊಂದೆಡೆ ಹಲವು ರೋಗಿಗಳ ಸಂಬಂಧಿಕರು ಸತತ 2 ಗಂಟೆಗಳ ಕಾಲ ಆಟೋ, ತಮ್ಮ ವಾಹನಗಳಲ್ಲಿ ರೋಗಿಗಳನ್ನು ಕೂರಿಸಿಕೊಂಡು ಆಕ್ಸಿಜನ್ ಬೆಡ್ಗಾಗಿ ಕಾಯ್ದರೂ ಯಾವುದೇ ಪ್ರಯೋಜನವಾಗದೇ ಕೊನೆಗೂ ಬೆಡ್ ಸಿಗದೇ ಮನೆಗೆ ವಾಪಸ್ ತೆರಳುತ್ತಿದ್ದಾರೆ.
ಇದಲ್ಲದೇ ಅನಗೋಳ ಗ್ರಾಮದಿಂದ ವೃದ್ಧೆಯೊಬ್ಬರನ್ನು ತಪಾಸಣೆಗೆ ಕರೆತಂದಿದ್ದ ಸಂಬಂಧಿಗಳು 2 ತಾಸು ವೈದ್ಯರಿಗಾಗಿ ಕಾದು ಸುಸ್ತಾಗಿ, ಏನಾಗಿದೆ ಎಂದು ಕೇಳುವವರೂ ಇಲ್ಲದೇ, ಬಹಳ ಹೊತ್ತು ಕಾಯಲು ಪೇಶೆಂಟ್‍ಗೂ ತಾಳ್ಮೆಯಿಲ್ಲ ಎಂದು ಹೇಳಿ ತೆರಳಿದರು.