ಬೆಳಗಾವಿ: ರೈತ ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ್, ಸಾರಿಗೆ ನೌಕರರನ್ನು ವಶಕ್ಕೆ ಪಡೆದಿರುವ ಪೊಲೀಸರ ಕ್ರಮ ಖಂಡನೀಯ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ. ರೈತ ಮುಖಂಡ ಇರಬಹುದು, ಕಾರ್ಮಿಕ ಮುಖಂಡ ಇರಬಹುದು, ರಾಜಕೀಯದವರಾದ ನಾವು ಸಹ ಸರ್ಕಾರದ ವಿರುದ್ಧವೇ ಪ್ರತಿಭಟನೆ ಮಾಡುತ್ತಿರುವುದು. ಅವರು ಮಾಡಿದ ತಪ್ಪುನ್ನು ಹೇಳುವುದು ನಮ್ಮ ಕೆಲಸ. ನಾವು ಸರ್ಕಾರವನ್ನು ಹೊಗಳಕ್ಕಾಗುತ್ತಾ? ಸಾರಿಗೆ ಸಿಬ್ಬಂದಿ ಬೇಡಿಕೆ ಇಡುವುದು ಅವರ ಹಕ್ಕು. ಅದನ್ನು ಮೊಟಕು ಮಾಡುತ್ತಿರುವ ಕ್ರಮ ಸರಿಯಲ್ಲ. ಕೋಡಿಹಳ್ಳಿ ಚಂದ್ರಶೇಖರ್, ಸಾರಿಗೆ ಸಿಬ್ಬಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದನ್ನು ನಾನು ಖಂಡಿಸುತ್ತೇನೆಂದರು.
ಪ್ರಜಾಪ್ರಭುತ್ವದಲ್ಲಿ ಇರುವ ಪ್ರತಿಭಟನೆಯ ಹಕ್ಕನ್ನು ಮೊಟಕುಗೊಳಿಸೋದು ಸರಿ ಅಲ್ಲ. ಸರ್ಕಾರವೇ ಅವರ ಬಳಿ ಹೋಗಿ ಚರ್ಚಿಸಿ ಸಮಸ್ಯೆ ಬಗೆಹರಿಸಬೇಕು. ಹೀಗೆ ಅರೆಸ್ಟ್ ಮಾಡುವ ಕ್ರಮ ಸರಿಯಲ್ಲ. ಇದು ಬಹಳ ದಿನ ಉಳಿಯುವುದಿಲ್ಲ ಎಂದರು.
ಕೊರೊನಾ ರಾತ್ರಿ ಅಷ್ಟೇ ಅಂಟುತ್ತಾ?
ರಾಜ್ಯದ 7 ಜಿಲ್ಲೆಗಳ 8 ನಗರಗಳಲ್ಲಿ ಇಂದಿನಿಂದ ನೈಟ್ ಕರ್ಫ್ಯೂ ಜಾರಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಹಗಲು ಕೊರೊನಾ ಅಂಟಲ್ಲ, ರಾತ್ರಿ ಅಂಟುತ್ತೆ ಅಂತಾ ಇವರಿಗೆ ಯಾವ ವಿಜ್ಞಾನಿ ಹೇಳಿದ್ದಾರೋ? ಅವರ ಫೋಟೋ ಇದ್ರೆ ಕೊಡಿ, ನಿತ್ಯ ಪೂಜೆ ಮಾಡುತ್ತೇವೆ. ರಾಜಕೀಯ ಸಭೆ ಅಥವಾ ಬೇರೆಡೆ ಇರಲಿ ಅಲ್ಲಿ ಜನ ಇರ್ತಾರೆ. ಆಗ ಕೊರೊನಾ ಅಂಟೋದಿಲ್ವಾ? ಮಾನಸಿಕವಾಗಿ ಜನರನ್ನು ಕುಗ್ಗಿಸಲಾಗುತ್ತಿದೆ. ರಾತ್ರಿ ಪ್ರಯಾಣ ನಿಲ್ಲಿಸಿಬಿಡ್ತೀರಾ? ಬೆಳಕಿದ್ದಾಗ ಕೊರೊನಾ ಇರಲ್ವಾ? ನೈಟ್ ಕರ್ಫ್ಯೂ ಜಾರಿ ಮಾಡಿದ್ದು ಅವೈಜ್ಞಾನಿಕ. ಈ ಸರ್ಕಾರನ್ನು ಕಿತ್ತೊಗೆಯಬೇಕು ಎಂದು ಕಿಡಿಕಾರಿದರು.
ಸಾರಿಗೆ ಸಿಬ್ಬಂದಿ ಬೀದಿಪಾಲಾಗ್ತಾರೆ ಎಂಬ ಲಕ್ಷ್ಮಣ ಸವದಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಲಕ್ಷಣ ಸವದಿ ಲೀಡರ್ಶಿಪ್ನಲ್ಲಿ ಕಾರ್ಯ ಹೇಗೆ ನಡೆಯುತ್ತಿದೆದೆ ಅಂತಾ ಗೊತ್ತು. ಅವರು ತಗೆದುಕೊಂಡ ನಿರ್ಧಾರಗಳೆಲ್ಲವೂ ರಿವರ್ಸ್ ಹೊಡೆದಿವೆ ಎಂದು ಟೀಕಿಸಿದರು.
ಇದನ್ನೂ ಓದಿ:ಮುಷ್ಕರ ನಿರತ ನೌಕರರ ಮೇಲೆ ಸರ್ಕಾರ ಸಮರ: ಮತ್ತೆ 118 ಬಿಎಂಟಿಸಿ ನೌಕರರು ವಜಾ
ಸತೀಶ್ ಜಾರಕಿಹೊಳಿ ಹಿಂದೂ ಸಂಸ್ಕೃತಿ ವಿರೋಧಿ ಅಲ್ಲ. ಅವರು ಮೂಢನಂಬಿಕೆ ಬೇಡ ಅಂತಾರೆ. ಸತೀಶ್ ಅವರು ಕಾಂಗ್ರೆಸ್ ನಾಯಕರು, ಕಾಂಗ್ರೆಸ್ಗೆ ತತ್ವ ಇದೆ, ನೀತಿ ಇದೆ. ಅರುಣ್ ಸಿಂಗ್‌ಗೆ ತಮ್ಮ ಪಕ್ಷದ ಅಭ್ಯರ್ಥಿ ಭಯ ಬಂದಿದೆ. ಆ ಭಯದಿಂದ ಅರುಣ್ ಸಿಂಗ್ ಹಾಗೆ ಮಾತನಾಡ್ತಿದ್ದಾರೆ ಎಂದರು.