ಬೆಳಗಾವಿ: ಆರ್.ಆರ್ ನಗರ ಉಪ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಐಎಎಸ್ ಅಧಿಕಾರಿ ದಿವಂಗತ ಡಿ.ಕೆ.ರವಿ ಪತ್ನಿ ಕುಸುಮಾ ಅವರಿಗೆ ನೀಡುವಂತೆ ಎಂಟಕ್ಕೂ ಅಧಿಕ ಮಾಜಿ ಸಚಿವರು ಹಾಗೂ ಹಾಲಿ ಶಾಸಕರು ಶಿಫಾರಸು ಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ದಿ. ಡಿ.ಕೆ.ರವಿ ಪತ್ನಿಗೆ ಟಿಕೆಟ್ ನೀಡಲು ಕೆಲವರು ಶಿಫಾರಸು ಮಾಡ್ತಿದ್ದಾರೆ. ಕೆಲವು ಹಿರಿಯ ನಾಯಕರು ಟಿಕೆಟ್ ನೀಡುವಂತೆ ಶಿಫಾರಸು ಮಾಡಿದ್ದಾರೆ.
ಕುಸುಮಾ ಅವರ ತಂದೆ ಮೊದಲು ನಮ್ಮಲ್ಲೇ ಇದ್ದರು. ಯಾವುದೋ ಕಾರಣಕ್ಕೆ ನಮ್ಮ ಪಕ್ಷ ಬಿಟ್ಟು ಹೋಗಿದ್ದರು. ಮಗಳದ್ದು ಪಾಪ ಏನಿದೆ? ಕುಸುಮಾಗೆ ಟಿಕೆಟ್ ನೀಡುವಂತೆ ಕೆಲವರು ಸಲಹೆ ಕೊಡ್ತಿದ್ದಾರೆ. ಈ ಬಗ್ಗೆ ನಾನು ಇನ್ನೂ ಚರ್ಚೆ ನಡೆಸಿಲ್ಲ. ಆರ್.ಆರ್ ನಗರ ಕ್ಷೇತ್ರದಲ್ಲಿ ಏಳೆಂಟು ಜನ ಆಕಾಂಕ್ಷಿಗಳಿದ್ದಾರೆ ಎಂದರು.
ಉಪ ಚುನಾವಣೆ ಕುರಿತು ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ಮುನಿರತ್ನಗೆ ಬಿಜೆಪಿ ಟಿಕೆಟ್ ನೀಡದೇ ಇದ್ದರೆ ಕಾಂಗ್ರೆಸ್ಗೆ ಸೇರಿಸಿಕೊಳ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಪಾರ್ಟಿಗೆ ಯಾರು ಬೇಕಾದರೂ ಅರ್ಜಿ ಕೊಡಬಹುದು. ಅರ್ಜಿಗಳೆಲ್ಲವೂ ಬರಲಿ, ಆಮೇಲೆ ಕುಳಿತುಕೊಂಡು ಮಾತನಾಡೋಣ. ಶಿರಾ ಮತ್ತು ಆರ್.ಆರ್ ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ನಾನೇನೂ ತೀರ್ಮಾನ ಮಾಡಲ್ಲ. ಇದಕ್ಕಾಗಿ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಸಮಿತಿ ಮಾಡಿದ್ದೇನೆ. ಅವರು ಎಲ್ಲರ ಜತೆ ಸಭೆ ಮಾಡಿ ಆಕಾಂಕ್ಷಿಗಳ ಹೆಸರನ್ನು ಶಿಫಾರಸು ಮಾಡ್ತಾರೆ. ಅಭ್ಯರ್ಥಿ ಆಯ್ಕೆ ಸಂಬಂಧ ನಾನು, ನನ್ನ ಶಾಸಕಾಂಗ ಪಕ್ಷದ ನಾಯಕರು, ವಿಪಕ್ಷ ನಾಯಕರು ಕುಳಿತು ಚರ್ಚೆ ಮಾಡಲಿದ್ದೇವೆ ಎಂದರು.
ಶಿರಾ ಕ್ಷೇತ್ರದಲ್ಲಿ ಎಲ್ಲರೂ ಸೇರಿ ಒಂದು ಅಭಿಪ್ರಾಯಕ್ಕೆ ಬಂದಿದ್ದಾರೆ. ಅವರು ಕಳಿಸಿದ ಅಭ್ಯರ್ಥಿಯನ್ನು ದೆಹಲಿಗೆ ಶಿಫಾರಸು ಮಾಡುತ್ತೇನೆ. ಬೆಳಗಾವಿ ಲೋಕಸಭಾ ಅಭ್ಯರ್ಥಿ ವಿಚಾರದ ಬಗ್ಗೆ ನನಗೇನೂ ಗೊತ್ತಿಲ್ಲ. ಫಸ್ಟ್ ಪಾರ್ಟಿ ಕಟ್ಟುವ ಕೆಲಸ, ಪಕ್ಷ ಸಂಘಟನೆ ಮಾಡಲು ಒತ್ತು ನೀಡುತ್ತೇವೆ ಎಂದರು.
ಡ್ರಗ್ಸ್ ಜಾಲದಲ್ಲಿ ಸಿಲುಕಿಕೊಂಡ ಅನುಶ್ರೀ ಸೇರಿ ಇತರರ ಜತೆ ಕೆಲವು ಪ್ರಭಾವಿಗಳ ನಂಟಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಆ ಬಗ್ಗೆ ಗೊತ್ತಿಲ್ಲ. ನಟಿಯರನ್ನು ಬಿಟ್ಟು ಬೇರೆ ಯಾರೂ ಡ್ರಗ್ಸ್ ತಗೊಂಡಿಲ್ವಾ? ಇವರೇನಾ ತಗೊಂಡಿರೋದು? ಟಿವಿಯಲ್ಲಿ ಬರೀ ಎಂಟರ್ಟೈನ್ಮೆಂಟ್ ಇಂಡಸ್ಟ್ರಿಯವರಲ್ಲಿರೋರನ್ನು ನೋಡಿ ಆಶ್ಚರ್ಯ ಆಗ್ತಿದೆ ಎಂದರು.