ಬೆಳಗಾವಿ: ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಯಾವುದೇ ರೀತಿಯಲ್ಲಿಯೂ ಚರ್ಚೆ ನಡೆದಿಲ್ಲ. ಬದಲಾಗಿ ನಮ್ಮ ಸಮಯ ವ್ಯರ್ಥ ಆಯಿತು ಎಂದು ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿ ಕಾರಿದರು.
ಇಲ್ಲಿನ ಟಿಳಕವಾಡಿ ವೀರಸೌಧಕ್ಕೆ ಭೇಟಿ ನೀಡಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ನಾವು ಜನರ ಭಾವನೆಯಾಗಿ ಪ್ರಜೆಗಳ ಧ್ವನಿಯಾಗಿ ಅವರ ನೋವನ್ನು ಎಲ್ಲರಿಗೂ ತಿಳಿಸಬೇಕು. ಈ ಭ್ರಷ್ಟ ಸರ್ಕಾರವನ್ನು ಮುಕ್ತಿಗೊಳಿಸಬೇಕು. ಬಿಜೆಪಿ ಆಡಳಿತವನ್ನು ಕೊನೆಗೊಳಿಸಬೇಕು. ಅಭಿವೃದ್ಧಿಶೀಲ ಕರ್ನಾಟಕ ನಿರ್ಮಾಣಕ್ಕಾಗಿ ಕಾಂಗ್ರೆಸ್ ಸರ್ಕಾರವನ್ನು ಸ್ಥಾಪಿಸಬೇಕು ಎಂದರು.
ರಾಜ್ಯಾದ್ಯಂತ ಜನವರಿ 11ರಿಂದ ಕಾಂಗ್ರೆಸ್ ಯಾತ್ರೆ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ದೇಶದಲ್ಲಿ ಸಮಗ್ರತೆ, ಐಕ್ಯತೆ ಮತ್ತು ಶಾಂತಿಗಾಗಿ ಪಾದಯಾತ್ರೆ (ಭಾರತ್ ಜೋಡೋ ಯಾತ್ರೆ) ಮಾಡುತ್ತಿದ್ದಾರೆ. ಇದರಂತೆ ರಾಜ್ಯದಲ್ಲೂ ಕಾಂಗ್ರೆಸ್ ಪಕ್ಷ ಜ.11ರಿಂದ ಯಾತ್ರೆಯನ್ನು ಪ್ರಾರಂಭಿಸಲಿದ್ದೇವೆ. ಜನರ ಧ್ವನಿಯಾಗಿ ನಾವು ಸದೃಢ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರಲು ಚುನಾವಣೆಗಿರುವ ಇನ್ನೆರಡು ಮೂರು ತಿಂಗಳಲ್ಲಿ ವಾಕ್ದಾನದ ಮೂಲಕ ಜನರಿಗೆ ಎಲ್ಲವನ್ನೂ ತಿಳಿಸಲಿದ್ದೇವೆ. ಸುಭದ್ರವಾದ, ಭ್ರಷ್ಟರಹಿರತ ಆಡಳಿತವನ್ನು ನಾವು ನೀಡಲಿದ್ದೇವೆ. ಈ ಯಾತ್ರೆಯ ಮೂಲಕ ಜನರಿಗೆ ಅದನ್ನು ತಿಳಿಸಲಿದ್ದೇವೆ ಎಂದು ಹೇಳಿದರು.