ಬೆಳಗಾವಿ : ಡಿಕೆ ಶಿವಕುಮಾರ್ ನನ್ನ ವೈಯಕ್ತಿಕ ಜೀವನವನ್ನು ಹಾಳು ಮಾಡಿದ್ದಾನೆ. ಈಗಾಗಲೇ ನನ್ನ ಬಗ್ಗೆ ವೈಯಕ್ತಿಕವಾಗಿ ಮಾತನಾಡಿದ್ದಾನೆ. ಇದು ಮುಂದುವರೆದರೆ ನಾನು ಅವನ ಬಗ್ಗೆ ಮಾತನಾಡಬೇಕಾಗುತ್ತದೆ. ಇದನ್ನೆಲ್ಲ ನಾನು ಗಟ್ಟಿಯಾಗಿ ಎದುರಿಸಿ ಹೊರಗೆ ಬಂದಿದ್ದೇನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಡಿಕೆ ಶಿವಕುಮಾರ್ ನನ್ನ ವೈಯಕ್ತಿಕ ಜೀವನ ಹಾಳು ಮಾಡಿದ್ದಾನೆ. ಈ ಕುರಿತು ನಾನು ಮುಖ್ಯಮಂತ್ರಿಗಳ ಜೊತೆ ಮಾತನಾಡಿದ್ದೇನೆ ಎಂದು ಹೇಳಿದರು. ಇನ್ನು ಸಿಡಿ ಪ್ರಕರಣವನ್ನು ಸಿಬಿಐ ವಹಿಸುವಂತೆ ನಾನು ಗೃಹ ಸಚಿವ ಅಮಿತ್ ಶಾ ಅವರ ಜೊತೆ ಮಾತನಾಡಿದ್ದೇನೆ. ಇದರಲ್ಲಿ ಓರ್ವ ಮಹಾನ್ ನಾಯಕ ಕೈವಾಡ ಇರುವ ಬಗ್ಗೆ ನನ್ನ ಬಳಿ ದಾಖಲೆ ಇದೆ. ಒಟ್ಟು 40 ಕೋಟಿ ರೂಪಾಯಿ ಖರ್ಚು ಮಾಡಿಸಿ ರಮೇಶ್ ಜಾರಕಿಹೊಳಿಗೆ ಶಿಕ್ಷೆ ಆಯ್ತು ಎಂದು ಮಾತುಕತೆ ನಡೆಸಿರುವ ದಾಖಲಾತಿ ನನ್ನ ಹತ್ತಿರ ಇದೆ ಎಂದು ಹೇಳಿದರು.
ಸಿಡಿ ಪ್ರಕರಣವನ್ನು ಬಯಲಿಗೆ ತರುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದೇನೆ. ಈ ಪ್ರಕರಣವನ್ನು ಸಿಬಿಐ ಒಪ್ಪಿಸಬೇಕು. ಸಿಡಿ ಪ್ರಕರಣದಲ್ಲಿ ಇಬ್ಬರು ಪ್ರಮುಖ ಆರೋಪಿಗಳು ಇದ್ದರು. ಒಬ್ಬ ಶಿರಾದವರು ಮತ್ತೊಬ್ಬ ದೇವನಹಳ್ಳಿಯವನು. ಇವರ ಮನೆ ಮೇಲೆ ದಾಳಿ ನಡೆಸಿದಾಗ ರಾಜ್ಯದ ಹಲವರ ಸಿಡಿ ಸಿಕ್ಕಿದೆ ಎಂದು ಮಾಹಿತಿ ನೀಡಿದರು. ಜೊತೆಗೆ ದಾಳಿ ನಡೆಸಿದ ಓರ್ವ ಅಧಿಕಾರಿಯ ಸಿಡಿಯೂ ಸಿಕ್ಕಿದೆ ಎಂದು ಹೇಳಿದರು. ಇದು ದೊಡ್ಡ ಪ್ರಕರಣವಾಗಿರುವುದರಿಂದ ಇದನ್ನು ಸಿಬಿಐ ತನಿಖೆಗೆ ಒಳಪಡಿಸಬೇಕೆಂದು ಆಗ್ರಹಿಸಿದರು.
ಸಿಡಿ ಪ್ರಕರಣ.. ಸಿಬಿಐ ತನಿಖೆಗೆ ಒತ್ತಾಯ :ಜನವರಿ 28ಕ್ಕೆ ಬೆಳಗಾವಿಗೆ ಅಮಿತ್ ಶಾ ಬರುತ್ತಾರೆ. ಇಲ್ಲೇನು ಅವರಿಗೆ ಹೇಳುದಿಲ್ಲ. ನಾನು ಮುಂದಿನ ವಾರ ದೆಹಲಿಗೆ ಹೋಗಿ ಅವರನ್ನು ಭೇಟಿ ಮಾಡಿ ಸಿಡಿ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡುವಂತೆ ಮನವಿ ಮಾಡುತ್ತೇನೆ. ಆ ಮಹಾ ನಾಯಕನ ಮುಖವಾಡ ಕಳಚುತ್ತೇನೆ. ನನ್ನ ರೀತಿ ಯಾರು ತೊಂದರೆ ಅನುಭವಿಸಬಾರದು ಎಂದು ಹೇಳಿದರು.