ಬೆಳಗಾವಿ: ಕಾಂಗ್ರೆಸ್ ಸೋಲಿಸುವುದೇ ನನ್ನ ಗುರಿ ಎಂದು ಜಿಲ್ಲೆಯಾದ್ಯಂತ ಸಂಚರಿಸಿ ಬಿರುಸಿನ ಮತಯಾಚನೆ ಮಾಡುತ್ತಿರುವ ರಮೇಶ್ ಜಾರಕಿಹೊಳಿ ತಂತ್ರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿತಂತ್ರ ಹೆಣೆದಿದ್ದಾರೆ.
ಬೆಳಗಾವಿ ಪರಿಷತ್ ಅಖಾಡಕ್ಕೆ ಧುಮುಕಿರುವ ಡಿಕೆಶಿ, ಜಿಲ್ಲೆಯ ಕಾಂಗ್ರೆಸ್ ನಾಯಕರ ಜೊತೆಗೆ ಸುದೀರ್ಘ ಸಭೆ ನಡೆಸಿದರು. ಬಳಿಕ ಮಾತನಾಡಿದ ಅವರು, ಬೆಳಗಾವಿಯಲ್ಲಿ ಮತದಾರರನ್ನು ಹೆದರಿಸುವ ಯತ್ನ ನಡೆಯುತ್ತಿದೆ. ಮತದಾರರ ಚೀಟಿ ಪಡೆದುಕೊಂಡು ಬೇರೆಯವರು ಮತ ಹಾಕುವುದು ನಡೆದುಕೊಂಡು ಬಂದಿದೆ. ಮತಗಟ್ಟೆಗಳಲ್ಲಿ ಸಿಸಿ ಕ್ಯಾಮರಾ ಹಾಕಬೇಕು ಎಂದು ಆಗ್ರಹಿಸಿದ್ದಾರೆ.
ಕಾಂಗ್ರೆಸ್-ಬಿಜೆಪಿ ಒಂದೇ ಸ್ಥಾನಕ್ಕೆ ಸ್ಪರ್ಧಿಸಿದೆ. ಆದರೆ ಪಕ್ಷೇತರ ಅಭ್ಯರ್ಥಿ ಪರವಾಗಿ ಆಡಳಿತ ಪಕ್ಷದ ಇಬ್ಬರು ಶಾಸಕರು ಚುನಾವಣೆ ಮಾಡುತ್ತಿದ್ದಾರೆ. ಇದು ನಮಗೂ ಗೊತ್ತಿದೆ, ನಿಮಗೂ ಗೊತ್ತಿದೆ, ಬಿಜೆಪಿಯವರಿಗೂ ಗೊತ್ತಿದೆ ಎಂದರು.