ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಗೆ ಥೂ.. ಥೂ.. ಎಂದ ರಮೇಶ್ ಜಾರಕಿಹೊಳಿವರ್ತನೆಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ.ಕೆ ಶಿವಕುಮಾರ್ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಸಂಸ್ಕೃತಿಯ ಪ್ರತಿಬಿಂಬ, ಬಿಜೆಪಿಯಲ್ಲಿ ಶೇ 50 ರಷ್ಟು ಹೆಣ್ಣು ಮಕ್ಕಳಿದ್ದಾರೆ. ಸಂಸ್ಕೃತಿ, ಸಂಸ್ಕಾರ ಇರುವಂತ ಪಕ್ಷ ಎಂದು ಬೊಬ್ಬೆ ಹೊಡೆಯುತ್ತಾರೆ. ಈಗ ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ, ಸಿಎಂ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಉತ್ತರ ಕೊಡಬೇಕು ಎಂದು ತಿವಿದರು.
ರಮೇಶ್ ಜಾರಕಿಹೊಳಿ ವರ್ತನೆಗೆ ಡಿಕೆಶಿ ಪ್ರತಿಕ್ರಿಯೆ ಬಿಜೆಪಿ ಶಿಸ್ತು ಮತ್ತು ಸ್ವಾಭಿಮಾನ ಪಕ್ಷ ಎನ್ನುವುದನ್ನು ಕೇಳಿದ್ದೇನೆ. ಶಿಸ್ತಿನ ಪಕ್ಷದಲ್ಲಿ ಬ್ಲಾಕ್ ಮೇಲರ್ಗಳು ಇದ್ದಾರೆ. ಅದು ಜನರಿಗೂ ಗೊತ್ತು. ಬಿಜೆಪಿಈ ಮಟ್ಟಕ್ಕೆ ಬಂದಿರುವುದು ನನಗೆ ಬಹಳ ಸಂತೋಷವಾಗಿದೆ. ಬ್ಲ್ಯಾಕ್ ಮೇಲರ್ಸ್ ಗೆ ಹೆದರಿಕೊಂಡು ಬಿಜೆಪಿ ಸರ್ಕಾರ ನಡೆಸುತ್ತಿದೆ. ಕಾಂಗ್ರೆಸ್ ಪಕ್ಷದಲ್ಲಿ ಈ ರೀತಿ ಆಗಿದ್ದರೆ ಅಂತವರಿಗೆ ಒಂದು ಗಂಟೆನೂ ಪಕ್ಷದಲ್ಲಿರಲು ಕಾಲಾವಕಾಶ ನೀಡುತ್ತಿರಲಿಲ್ಲ ಎಂದು ಸಿಡಿಮಿಡಿಗೊಂಡರು.
ಕಾಂಗ್ರೆಸ್ ಅಭ್ಯರ್ಥಿ ಸೋಲಿಸಲು ಮಾಜಿ ಸಚಿವರಮೇಶ್ ಜಾರಕಿಹೊಳಿ ಅವರ ಶಪಥದ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ, ಅವರು ಮಾತನಾಡಲಿ, ಗ್ರಾ.ಪಂ ಸದಸ್ಯರು ದಡ್ಡರೇ. ಅಲ್ಲಿಂದಲೇ ತಕ್ಕ ಉತ್ತರ ಸಿಗಲಿದೆ ಎಂದು ಟಾಂಗ್ ಕೊಟ್ಟರು.