ಕರ್ನಾಟಕ

karnataka

ETV Bharat / state

ಕುಂದಾನಗರಿಯಲ್ಲಿ ದೀಪಾವಳಿ ವಿಶೇಷ ಆಚರಣೆ: ಕೋಟೆ ಕಟ್ಟಿ ಬೆಳಕಿನ ಹಬ್ಬ ಸಂಭ್ರಮಿಸುವ ಮಕ್ಕಳು - ಕೋಟೆಗಳ ಅತ್ಯುತ್ತಮ ಮಾದರಿ

Children celebrate Diwali by building forts: ಕೋಟೆಗಳ ಅತ್ಯುತ್ತಮ ಮಾದರಿ ನಿರ್ಮಿಸುವ ಬಾಲಕರಿಗೆ ವಿವಿಧ ಸಂಘ ಸಂಸ್ಥೆಗಳು ನಗದು ಬಹುಮಾನ ನೀಡಿ, ಇನ್ನುಷ್ಟು ಚೆನ್ನಾಗಿ ಮಾಡುವಂತೆ ಹುರಿದುಂಬಿಸುತ್ತವೆ.

Children celebrate festival by building forts
ಕೋಟೆ ಕಟ್ಟಿ ಬೆಳಕಿನ ಹಬ್ಬ ಸಂಭ್ರಮಿಸುವ ಮಕ್ಕಳು

By ETV Bharat Karnataka Team

Published : Nov 11, 2023, 7:25 PM IST

Updated : Nov 11, 2023, 8:05 PM IST

ಕುಂದಾನಗರಿಯಲ್ಲಿ ದೀಪಾವಳಿ ವಿಶೇಷ ಆಚರಣೆ: ಕೋಟೆ ಕಟ್ಟಿ ಬೆಳಕಿನ ಹಬ್ಬ ಸಂಭ್ರಮಿಸುವ ಮಕ್ಕಳು

ಬೆಳಗಾವಿ: ದೀಪಾವಳಿ ಹಬ್ಬವನ್ನು ಒಂದೊಂದು ಭಾಗಗಳಲ್ಲಿ ಒಂದೊಂದು ರೀತಿ ಆಚರಿಸುತ್ತಾರೆ. ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮಕ್ಕಳು ಕೋಟೆ ಕಟ್ಟಿ ಸಂಭ್ರಮಿಸುತ್ತಾರೆ. ಛತ್ರಪತಿ ಶಿವಾಜಿ ಮಹಾರಾಜರ ಧೈರ್ಯ, ಸಾಹಸ, ಪರಾಕ್ರಮವನ್ನು ಇಂದಿನ ಪೀಳಿಗೆಗೆ ತಿಳಿಸುವ ಕೆಲಸ ಮಾಡುತ್ತಿದ್ದಾರೆ. ಆ ಕುರಿತು ಈಟಿವಿ ಭಾರತದ ವಿಶೇಷ ವರದಿ ಇಲ್ಲಿದೆ.

ದೀಪಾವಳಿ ಹಬ್ಬಕ್ಕೆ ಪಟಾಕಿ ಹಚ್ಚಿ, ದೀಪ ಬೆಳಗಿಸಿ, ಸಿಹಿ ಹಂಚಿ ಸಂಭ್ರಮಿಸುವುದು ಸಾಮಾನ್ಯ. ಆದರೆ ಕುಂದಾನಗರಿಯ ಮಕ್ಕಳು ಮಾತ್ರ ಐತಿಹಾಸಿಕ ಕೋಟೆಗಳ ಮಾದರಿ ನಿರ್ಮಿಸಿ ಅನೇಕ ವರ್ಷಗಳಿಂದ ಅರ್ಥಪೂರ್ಣವಾಗಿ ದೀಪಾವಳಿ ಹಬ್ಬವನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಛತ್ರಪತಿ ಶಿವಾಜಿ ಮಹಾರಾಜರು ಗೆದ್ದಿದ್ದ ಐತಿಹಾಸಿಕ ಕೋಟೆಗಳಾದ ರಾಯಗಡ, ಶಿವನೇರಿ, ಭೀಮಗಡ, ಪ್ರತಾಪಗಡ, ಪಾರಗಡ, ರಾಜಗಡ, ತೋರಣಗಡ, ಸಿಂಹಗಡ ಕೋಟೆಗಳ ಮಾದರಿಯನ್ನು ನಿರ್ಮಿಸಿರುವ ಮಕ್ಕಳು ಕೋಟೆಗೆ ಬಣ್ಣ, ಸುಣ್ಣ ಬಳಿದು ಅಂತಿಮ ಸ್ಪರ್ಶ ನೀಡುತ್ತಿದ್ದಾರೆ. ನಾಳೆ ದೀಪಾವಳಿ ಹಬ್ಬದ ದಿನ ಕೋಟೆ ಉದ್ಘಾಟಿಸಿ, ಶಿವಾಜಿ ಮಹಾರಾಜರ ಮೂರ್ತಿಗೆ ಪೂಜೆ ಸಲ್ಲಿಸಲಿದ್ದಾರೆ.

ಕೋಟೆ ಕಟ್ಟಿ ಬೆಳಕಿನ ಹಬ್ಬ ಸಂಭ್ರಮಿಸುವ ಮಕ್ಕಳು

ಮಕ್ಕಳ ಉತ್ಸಾಹಕ್ಕೆ ಪಾರವೇ ಇಲ್ಲ: ಬೆಳಗಾವಿಯ ಮಕ್ಕಳಿಗೆ ಶಿವಾಜಿ ಮಹಾರಾಜರ ಬಗ್ಗೆ ಅತಿಯಾದ ಅಭಿಮಾನ. ಸ್ವಯಂ ಸ್ಫೂರ್ತಿಯಿಂದ ಮಕ್ಕಳೇ ಕೂಡಿಕೊಂಡು ಮಣ್ಣು, ಕಲ್ಲು ಸಂಗ್ರಹಿಸಿ ಕೋಟೆ ಕಟ್ಟುವ ಅವರ ಉತ್ಸಾಹ ಹೇಳತೀರದು. ಇದಕ್ಕೆ ಒಂದು ತಿಂಗಳಿನಿಂದ ಆ ಚಿಣ್ಣರು ತಯಾರಿ ನಡೆಸಿರುತ್ತಾರೆ. ಮಕ್ಕಳ ಪ್ರಯತ್ನದಿಂದ ಬಡಕಲ ಗಲ್ಲಿಯಲ್ಲಿ ಎರಡೂವರೇ ಅಡಿ ಎತ್ತರದ ಪ್ರತಾಪಗಡ ಕೋಟೆ ಮಾದರಿ ಸಿದ್ಧವಾಗಿದೆ.

ಈಟಿವಿ ಭಾರತ ಜೊತೆಗೆ ಮಾತನಾಡಿದ ಓಂಕಾರ ಅಕ್ಕತಂಗೇರಹಾಳ, ಹಿಂದವಿ ಸಾಮ್ರಾಜ್ಯ ಸಂಸ್ಥಾಪಕ ಶಿವಾಜಿ ಮಹಾರಾಜರ ಬಗ್ಗೆ ನಮಗೆಲ್ಲಾ ಅತಿಯಾದ ಅಭಿಮಾನ. ಇನ್ನು ದೀಪಾವಳಿಯಲ್ಲಿ ಎಲ್ಲರಂತೆ ಪಟಾಕಿ ಸಿಡಿಸಿ ಎಂಜಾಯ್ ಮಾಡೋದು ನಮಗೆ ಇಷ್ಟ ಆಗುವುದಿಲ್ಲ. ನಮಗೆ ಕೋಟೆ ಕಟ್ಟುವುದರಲ್ಲೇ ಖುಷಿ ಸಿಗುತ್ತದೆ. ನಾಳೆ ಪೂಜೆ ಇರುತ್ತದೆ‌. ಕೋಟೆ ಸುತ್ತಲೂ ಶಿವಾಜಿ ಮಹಾರಾಜರ ಜೀವನಚರಿತ್ರೆ ಬಿಂಬಿಸುವ ಚಿತ್ರ ಅಳವಡಿಸುತ್ತೇವೆ. ಇದೆಲ್ಲಾ ನಮಗೆ ಬಹಳಷ್ಟು ಖುಷಿ ಕೊಡುತ್ತದೆ ಎಂದರು.

ಕೋಟೆ ಕಟ್ಟಿ ಬೆಳಕಿನ ಹಬ್ಬ ಸಂಭ್ರಮಿಸುವ ಮಕ್ಕಳು

ಚವ್ಹಾಟ ಗಲ್ಲಿಯಲ್ಲಿ ರಾಯಗಡ ಕೋಟೆ ನಿರ್ಮಾಣದಲ್ಲಿ ಮಕ್ಕಳು ತೊಡಗಿದ್ದಾರೆ. ಬಾಲಕ ಪಾಲಾಕ್ಷಿ ಗೌಡರ ಮಾತನಾಡಿ, ದೀಪಾವಳಿ ಹಬ್ಬದ ಸಂದರ್ಭದಲ್ಲಿ ಅತ್ಯಂತ ಅಭಿಮಾನ ಮತ್ತು ಖುಷಿಯಿಂದ ಕೋಟೆ ಕಟ್ಟುತ್ತೇವೆ. ಕೋಟೆ ನೋಡಿ‌ದವರಿಗೆ ಶಿವಾಜಿ ಮಹಾರಾಜರ ಜೀವನ ಕಣ್ಮುಂದೆ ಬರುತ್ತದೆ ಎಂದರು.

ಅತ್ಯುತ್ತಮ ಕೋಟೆಗೆ ಬಹುಮಾನ: ಬೆಳಗಾವಿಯ ವಿವಿಧ ಸಂಘ, ಸಂಸ್ಥೆ ಹಾಗೂ ಸಂಘಟನೆಗಳು ಅತ್ಯುತ್ತಮ ಕೋಟೆ ಮಾದರಿ ನಿರ್ಮಿಸಿದ ಬಾಲಕರಿಗೆ ನಗದು ಬಹುಮಾನ ವಿತರಿಸಿ ಪ್ರೋತ್ಸಾಹಿಸುತ್ತವೆ. ಇದರಿಂದ ಮಕ್ಕಳಲ್ಲಿ ಉತ್ಸಾಹ ಹೆಚ್ಚಾಗುತ್ತದೆ. ಅಲ್ಲದೇ ಇದು ವರ್ಷದಿಂದ ವರ್ಷಕ್ಕೆ ಮತ್ತಷ್ಟು ಆಕರ್ಷಣೀಯವಾಗಿ ಕೋಟೆ ನಿರ್ಮಿಸಲು ಮಕ್ಕಳನ್ನು ಹುರಿದುಂಬಿಸುತ್ತದೆ.

ಬೆಳಗಾವಿಯ ಗಲ್ಲಿ ಗಲ್ಲಿಯಲ್ಲಿ ದೀಪಾವಳಿ ಹಬ್ಬದ ನಿಮಿತ್ತ ಮಕ್ಕಳು ನಿರ್ಮಿಸುವ ಶಿವಾಜಿ ಮಹಾರಾಜರ ಕೋಟೆ ಮಾದರಿಗಳು ತಲೆ ಎತ್ತಿವೆ. ಕೋಟೆಗೆ ಅಂತಿಮ ಸ್ಪರ್ಶ ನೀಡಲು ತೊಡಗಿರುವ ಮಕ್ಕಳು ನಾಳೆ ಕೋಟೆ ಉದ್ಘಾಟಿಸಲಿದ್ದಾರೆ.

ಕೋಟೆ ವೀಕ್ಷಣೆಗೆ ಮುಗಿ ಬೀಳುವ ಜನ:ಗಣೇಶೋತ್ಸವ ವೇಳೆ ಗಲ್ಲಿ ಗಲ್ಲಿಗಳಲ್ಲಿ ಪ್ರತಿಷ್ಠಾಪಿಸಿದ್ದ ಸಾರ್ವಜನಿಕ ಗಣೇಶ ಮೂರ್ತಿಗಳ ವೀಕ್ಷಣೆಗೆ ಜನ ಹೇಗೆ ಬರುತ್ತಾರೋ, ಅದೇ ರೀತಿ ದೀಪಾವಳಿಯಲ್ಲಿ ಮಕ್ಕಳು ತಯಾರಿಸಿದ ಕೋಟೆಗಳನ್ನು ಜನ ಕಣ್ತುಂಬಿಕೊಳ್ಳುತ್ತಾರೆ. ಕಲರ್ ಕಲರ್ ಲೈಟಿಂಗ್​ನಲ್ಲಿ ಕೋಟೆಗಳು ಝಗಮಗಿಸುತ್ತವೆ. ದೀಪಾವಳಿ ಆರಂಭವಾದಲ್ಲಿಂದ 20 ದಿನಗಳವರೆಗೆ ರಾತ್ರಿ ವೇಳೆ ಕೋಟೆ ನೋಡಲು ಜನ ಮುಗಿ ಬೀಳುತ್ತಾರೆ. ಹೀಗೆ ಬಂದ ಜನರು ಮಕ್ಕಳಲ್ಲಿನ ಕಲೆ ಮತ್ತು ಅಭಿಮಾನ ಕಂಡು ಶಹಬಾಸ್​ಗಿರಿ ನೀಡುತ್ತಾರೆ.

ಇದನ್ನೂ ಓದಿ:ಲಕ್ಷ್ಮಿ ಪೂಜೆಗೆ 24 ಕ್ಯಾರೆಟ್​ ಚಿನ್ನ ಲೇಪಿತ ವಿಶೇಷ ಸ್ವೀಟ್ಸ್​: ಕೆಜಿಗೆ 12,000 ರೂಪಾಯಿ

Last Updated : Nov 11, 2023, 8:05 PM IST

ABOUT THE AUTHOR

...view details