ಬೆಳಗಾವಿ:ಕಳೆದ 10 ದಿನಗಳಿಂದ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕೊರೊನಾ ಉಲ್ಬಣಗೊಂಡಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಲಾಗಿದೆ.
ಜಿಲ್ಲಾ ಉಸ್ತುವಾರಿ ಜವಾಬ್ದಾರಿ ವಹಿಸಿಕೊಂಡ ಬಳಿಕ ಗೋವಿಂದ ಕಾರಜೋಳ ಇದೆ ಮೊದಲ ಬಾರಿಗೆ ಬೆಳಗಾವಿಗೆ ಆಗಮಿಸಿದರು. ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಸಚಿವ ಉಮೇಶ್ ಕತ್ತಿ, ಸಂಸದೆ ಮಂಗಳಾ ಅಂಗಡಿ, ಶಾಸಕರಾದ ಅಭಯ ಪಾಟೀಲ್ ಹಾಗೂ ಅನಿಲ್ ಬೆನಕೆ ಭಾಗಿಯಾಗಿದ್ದರು.
ಜಿಲ್ಲೆಯಲ್ಲಿ ಕಳೆದ 10 ದಿನಗಳಿಂದ 500ಕ್ಕೂ ಅಧಿಕ ಸೋಂಕು ಪತ್ತೆಯಾಗುತ್ತಿವೆ. ಕೊರೊನಾ ಉಲ್ಬಣಗೊಳ್ಳಲು ಕಾರಣವೇನು? ಗಡಿ ಭಾಗಗಳಲ್ಲಿ ತೆರೆಯಲಾದ ಚೆಕ್ ಫೋಸ್ಟ್ ಕಾರ್ಯನಿರ್ವಹಣೆಯಲ್ಲಿ ಲೋಪವಾಗಿದ್ದೆಲ್ಲಿ.? ಅಲ್ಲದೇ ಕಳ್ಳದಾರಿ ಮೂಲಕ ಮಹಾರಾಷ್ಟ್ರದಿಂದ ಬರುವವರನ್ನು ನಿಯಂತ್ರಿಸುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಜಿಲ್ಲಾಸ್ಪತ್ರೆಯಲ್ಲಿ ಬೆಡ್ ಸಂಖ್ಯೆ ಹೆಚ್ಚಿಸಬೇಕು. ಆಕ್ಸಿಜನ್ ಕೊರತೆ ಆಗದಂತೆ ನಿಗಾ ವಹಿಸುವಂತೆ ನಿರ್ದೇಶಿಸಿದ್ದಾರೆ. ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಹರೀಶಕುಮಾರ್, ಡಿಎಚ್ಒ ಡಾ. ಶಶಿಕಾಂತ ಮುನ್ಯಾಳ, ಬಿಮ್ಸ್ ನಿರ್ದೇಶಕ ಡಾ. ವಿನಯ್ ದಾಸ್ತಿಕೊಪ್ಪ ಸೇರಿ ಇತರರು ಉಪಸ್ಥಿತರಿದ್ದರು.