ಚಿಕ್ಕೋಡಿ: ಮಹಾರಾಷ್ಟ್ರದಿಂದ ಬೆಳಗಾವಿ ಮೂಲಕ ರಾಜ್ಯದ ಗಡಿ ಪ್ರವೇಶಿಸುವ ಪ್ರಯಾಣಿಕರು ಕೋವಿಡ್ ನೆಗೆಟಿವ್ ವರದಿ ಹೊಂದಿರುವುದು ಕಡ್ಡಾಯಗೊಳಿಸಲಾಗಿದೆ. ಆದ್ದರಿಂದ ಸರಕಾರದ ಮಾರ್ಗಸೂಚಿ ಪ್ರಕಾರ ನೆಗೆಟಿವ್ ವರದಿ ಹೊಂದಿದವರಿಗೆ ಮಾತ್ರ ರಾಜ್ಯದೊಳಗೆ ಪ್ರಯಾಣಕ್ಕೆ ಅವಕಾಶ ನೀಡಬೇಕು ಎಂದು ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಸೂಚನೆ ನೀಡಿದ್ದಾರೆ.
ಜಿಲ್ಲೆಯ ಕುಗನೊಳ್ಳಿ ಹಾಗೂ ಕಾಗವಾಡ ಚೆಕ್ ಪೋಸ್ಟ್ಗಳಿಗೆ ಜಿಲ್ಲಾಧಿಕಾರಿ ಭಾನುವಾರ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಅಲ್ಲಿ ನಿಯೋಜಿತ ಅಧಿಕಾರಿಗಳು ಹಾಗೂ ತಂಡಗಳ ಸಿಬ್ಬಂದಿ ಜತೆ ಚರ್ಚೆ ನಡೆಸಿದ ಅವರು, ಮಹಾರಾಷ್ಟ್ರ ಹಾಗೂ ಕೇರಳ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ರಾಜ್ಯದ ಗಡಿಯಲ್ಲಿ ವಿಶೇಷ ಸರ್ವೇಕ್ಷಣಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ಮಹಾರಾಷ್ಟ್ರದಿಂದ ಆಗಮಿಸುವ ಪ್ರಯಾಣಿಕರು ಎರಡೂ ಡೋಸ್ ಲಸಿಕೆ ಪಡೆದಿದ್ದರೂ ಸಹ 72 ಗಂಟೆಯೊಳಗೆ ಮಾಡಿಸಿರುವ ಆರ್‌ಟಿಪಿಸಿಆರ್ ಪರೀಕ್ಷೆಯ ವರದಿ ನೆಗೆಟಿವ್ ಹೊಂದಿರುವುದು ಕಡ್ಡಾಯವಾಗಿದೆ. ಒಂದು ವೇಳೆ ಕುಟುಂಬದಲ್ಲಿ ಮರಣ ಅಥವಾ ತುರ್ತು ವೈದ್ಯಕೀಯ ಚಿಕಿತ್ಸೆಯ ಹಿನ್ನೆಲೆಯಲ್ಲಿ ರಾಜ್ಯವನ್ನು ಪ್ರವೇಶಿಸ ಬಯಸುವ ಪ್ರಯಾಣಿಕರಿಗೆ ಗಡಿಭಾಗದ ಚೆಕ್ ಪೋಸ್ಟ್‌ಗಳಲ್ಲಿ ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ (ರ್ಯಾಟ್) ಮಾಡಿಸಬೇಕು. ಅದರ ವರದಿ ನೆಗೆಟಿವ್ ಇದ್ದರೆ ಅವಕಾಶ ಕಲ್ಪಿಸಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.