ಬೆಳಗಾವಿ: ನೆರೆಯ ಮಹಾರಾಷ್ಟ್ರ ಹಾಗೂ ಬೆಳಗಾವಿ ಜಿಲ್ಲೆಯಾದ್ಯಂತ ನಾಲ್ಕೈದು ದಿನಗಳಿಂದ ವ್ಯಾಪಕವಾಗಿ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ವೇದಗಂಗಾ ಮತ್ತು ದೂದಗಂಗಾ ನದಿತೀರದ ಪ್ರದೇಶಗಳಿಗೆ ಖುದ್ದಾಗಿ ತೆರಳಿ ಪ್ರವಾಹ ನಿರ್ವಹಣೆಯ ಸಿದ್ಧತೆಗಳನ್ನು ಪರಿಶೀಲಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಸೇರಿದಂತೆ ಸಂಬಂಧಪಟ್ಟ ವಿವಿಧ ಇಲಾಖೆಯ ಅಧಿಕಾರಿಗಳು ಡಿಸಿ ಜೊತೆಗಿದ್ದರು. ನಿಪ್ಪಾಣಿ ತಾಲ್ಲೂಕಿನ ವೇದಗಂಗಾ ನದಿಪಾತ್ರದ ಕೋಡ್ನಿ ಗ್ರಾಮಕ್ಕೆ ತೆರಳಿದ ಜಿಲ್ಲಾಧಿಕಾರಿಗಳು, ವೇದಗಂಗಾ ಮತ್ತು ಉಪನದಿಯ ನದಿಯ ಹರಿವಿನ ಪ್ರಮಾಣ ಹಾಗೂ ಅಪಾಯದ ಮಟ್ಟದ ಕುರಿತು ಮಾಹಿತಿ ಪಡೆದುಕೊಂಡರು.